
ಚಾಮರಾಜನಗರ ಏ7 ಜಿಲ್ಲೆಯ ವಿವಿಧ ಭಾಗಗಳಲ್ಲಿ ಇರುವ ಮೈಸೂರು ಮಹಾರಾಜರಿಗೆ ಸೇರಿದ ಸಾವಿರಾರು ಎಕರೆ ಜಮೀನು, ಆಸ್ತಿಗಳನ್ನು ಇತರರ ಹೆಸರಿಗೆ ಖಾತೆ ಮಾಡದಂತೆ, ಕಂದಾಯ ಗ್ರಾಮಗಳಾಗಿ ಘೋಷಿಸದಂತೆ ಪ್ರಮೋದಾದೇವಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ1951 ರಲ್ಲಿ ಮೈಸೂರು ಮಹಾರಾಜರಿಗೂ ಭಾರತ ಸರ್ಕಾರಕ್ಕೂ ಆದ ಒಪ್ಪಂದದಂತೆ ಈ ಎಲ್ಲಾ ಆಸ್ತಿಗಳನ್ನು ತಮ್ಮ ಹೆಸರಿಗೆ ಖಾತೆ ಮಾಡಿ ಕೊಡುವಂತೆ ಜಿಲ್ಲಾಧಿಕಾರಿಗಳು,ಉಪವಿಭಾಗಾಧಿಕಾರಿಗಳು,ತಹಸೀಲ್ದಾರರು,ಭೂದಾಖಲೆಗಳ ಉಪನಿರ್ದೇಶಕರು,ಸಹಾಯಕ ನಿರ್ದೇಶಕರು ಇವರಿಗೆ ಅರ್ಜಿ ಸಲ್ಲಿಸಿದ್ದಾರೆ. 21 ಮಾರ್ಚಿ 2025 ರಂದು ಈ ತಕರಾರು ಅರ್ಜಿ, ಸಲ್ಲಿಕೆಯಾಗಿದೆ. ಆದರೆ ಇದೀಗ ಇದು ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗಿದೆ. ಅಟ್ಟಗೂಳಿಪುರ ಒಂದರಲ್ಲೇ 4445 ಎಕರೆ ವಿಶಾಲವಾದ ಆಸ್ತಿ ಮಹಾರಾಜರ ಖಾಸಗಿ ಆಸ್ತಿ ಎಂದು ತೋರಿಸಿದ್ದಾರೆ. ಇದಲ್ಲದೆ ಹರದನಹಳ್ಳಿ, ಬೂದಿತಿಟ್ಟು, ಕರಡಿಹಳ್ಳ, ಕಾನಿಕೆರೆ,ಉಮ್ಮತ್ತೂರು,ಬಸವಪುರ, ಕಸಬಾ ಹೋಬಳಿಯಲ್ಲೂ ನೂರಾರು ಎಕರೆ ಮಹಾರಾಜರ ಖಾಸಗಿ ಆಸ್ತಿ ಎಂದು ತೋರಿಸಿದ್ದಾರೆ. ಈ ಎಲ್ಲಾ ಆಸ್ತಿಗಳು ಸೇರಿದರೆ 5200 ಎಕರೆಗೂ ಹೆಚ್ಚಿನ ಆಸ್ತಿ ಆಗುತ್ತದೆ. 1951 ರಲ್ಲಿ ಭಾರತ ಸರ್ಕಾರದ ಜೊತೆ ಒಪ್ಪಂದವಾದ ಮೇಲೆ ಸುಮಾರು 75 ಕ್ಕೂ ಹೆಚ್ಚು ವರ್ಷಗಳು ಇವರು ಸುಮ್ಮನಿದ್ದು,ಇದೀಗ ತಕರಾರು ಅರ್ಜಿ ಸಲ್ಲಿಸಿರುವುದು ಅನೇಕ ಅನುಮಾನಗಳನ್ನು ಹುಟ್ಟಿ ಹಾಕಿದೆ. ಪ್ರಮೋದಾದೇವಿಯವರು ಕಾಣಿಸಿರುವ ಬಹುತೇಕ ಆಸ್ತಿಗಳು, ಚಾಮರಾಜನಗರ ಸ್ಟೇಟ್ ಫಾರೆಸ್ಟ್, ಹರದನಹಳ್ಳಿ ಡಿಸ್ಟ್ರಿಕ್ಟ್ ಫಾರೆಸ್ಟ್ ಗೆ ಸೇರಿದ ಪ್ರದೇಶಗಳಾಗಿವೆ. ಕೆಲವಕ್ಕೆ ಕಂದಾಯ ಇಲಾಖೆಯವರು ಅನಧಿಕೃತವಾಗಿ ಪುಣಜನೂರು ಸ್ಟೇಟ್ ಫಾರೆಸ್ಟ್ ಎಂದು ನಾಮಕರಣ ಮಾಡಿದ್ದಾರೆ. ಬಿ.ರಾಚಯ್ಯನವರು ಅರಣ್ಯ ಇಲಾಖೆಯಿಂದ ರಿಲೀಸ್ ಮಾಡಿಸಿ ದಲಿತರು,ಆದಿವಾಸಿಗಳು, ಬಂಜಾರ ಜನಾಂಗದ ಬಡವರಿಗೆ 4 ಎಕರೆಯಂತೆ ದರಖಾಸ್ತು ಮಂಜೂರು ಮಾಡಿರುವ ಸಿದ್ದಯ್ಯನಪುರ, ಕುಂಬೇಶ್ವರ ಕಾಲೋನಿಗಳು ಸಹ ಇದರಡಿ ಬರುತ್ತವೆ.ಮೂಡಳ್ಳಿ ಮೊದಲೆಡೆ ದಲಿತರಿಗೆ ಸಮುದಾಯ ಬೇಸಾಯಕ್ಕೆ ನೀಡಿದ ಜಮೀನುಗಳು ಇದರಡಿ ಬರುತ್ತವೆ. ಬೂದಿಪಡಗದಲ್ಲಿ ಆನೆ ಖೆಡ್ಡಾ ಕಾರ್ಯಾಚರಣೆ ನಡೆದಾಗ ಬ್ಯಾಡಮೂಡ್ಲು, ಚಿಕ್ಕಮೋಳೆ ದೊಡ್ಡಮೋಳೆ ಭಾಗದಲ್ಲಿ ಸ್ಯಾಂಡರ್ಸನ್ ಎಂಬಾತನಿಗೆ ಮಹಾರಾಜರು ಬಂಗಲೆ ಕಟ್ಟಿಕೊಂಡು ಇರಲು ನೀಡಿದ ಜಾಗವು ಇದರಲ್ಲಿ ಸೇರುತ್ತದೆ. ಲಂಬಾಣಿ ಜನಾಂಗದವರು ಲಾಗಾಯ್ತಿನಿಂದ ವಾಸ ಇರುವ ಕೋಳಿಪಾಳ್ಯ,ಮೂಕನಪಾಳ್ಯ, ವೀರಯ್ಯನಪುರ,ಎತ್ತೇಗೌಡನ ದೊಡ್ಡಿ, ಸಿದ್ದಯ್ಯನಪುರ ಕುಂಬೇಶ್ವರ ಕಾಲೋನಿ, ಚಿಕ್ಕ ಮೂಡಳ್ಳಿ,ದೊಡ್ಡ ಮೂಡಳ್ಳಿ ಈ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸ ಬೇಕೆಂದು ಇವರು ಅನೇಕ ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಸುವರ್ಣಾವತಿ ಅಣೆಕಟ್ಟು ಸಹ ಸೇರುತ್ತದೆ. ಇಗಾಗಲೇ ಬಡವರಿಗೆ ಹಂಚಿಕೆಯಾಗಿರುವ ಭೂಮಿ ಹಿಂದಕ್ಕೆ ಪಡೆದು ಖಾತೆ ಮಾಡಲು ಹೇಗೆ ಬರುತ್ತದೆ?
ಪ್ರಮೋದಾದೇವಿಯವರು ಪಟ್ಟಿಯಲ್ಲಿ ಕಾಣಿಸಿರುವ ಚಾಮರಾಜನಗರದ ಜನನ ಮಂಟಪದ ಜಾಗವನ್ನು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಈಗಾಗಲೇ ಮಾರಾಟ ಮಾಡಿದ್ದಾರೆ. ಇದು ಸರ್ಕಾರಿ ದಾಖಲೆಗಳಲ್ಲಿ ಸರ್ಕಾರಿ ತೋಪು ಎಂದಿದೆ. ಸಾಮಾಜಿಕ ಹೋರಾಟಗಾರರಾದ ಸತ್ಯನಾರಾಯಣ್ ಜನನ ಮಂಟಪದ ಜಾಗ ಸರ್ಕಾರಕ್ಕೆ ಸೇರಿದ್ದೆಂದು ಕಾನೂನು ಹೋರಾಟ ನಡೆಸಿದ್ದರು. ಈಗಲೂ ಸುರೇಶ್ ವಾಜಪೇಯಿ ಹೋರಾಟ ಮುಂದುವರಿಸಿದ್ದಾರೆ. ತಮ್ಮ ಪತಿ ಮಾರಾಟ ಮಾಡಿರುವ ಜಾಗವನ್ನು ಮತ್ತೆ ಪಟ್ಟಿಯಲ್ಲಿ ಕಾಣಿಸಿದ್ದಾರೆ. ಇದರ ಹಿಂದಿನ ಹಕೀಕತ್ತು ಅರ್ಥವಾಗುತ್ತಿಲ್ಲ.
ಜಿಲ್ಲಾಧಿಕಾರಿ ಶಿಲ್ಪಾನಾಗ್ ರನ್ನು ಈ ಬಗ್ಗೆ ಕೇಳಿದಾಗ ತಮಗೆ ಅರ್ಜಿ ಮತ್ತು ತಕರಾರು ಅರ್ಜಿ ಬಂದಿರುವುದು ನಿಜ. ಈ ಹಿಂದೆ ಬಡವರಿಗೆ ದರಕಾಸ್ತು ನೀಡಿರುವ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ದಶಕಗಳಿಂದ ಹಕ್ಕೋತ್ತಾಯ ಮಂಡಿಸಿದ್ದಾರೆ. ಅದರ ದಾಖಲೆಗಳನ್ನು ಪರಿಶೀಲಿಸಿ ಕಂದಾಯ ಗ್ರಾಮಗಳೆಂದು ಘೋಷಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಗ್ರಾಮಗಳು ವ್ಯಾಪ್ತಿಗೆ ಬರುತ್ತವೆ ಎಂಬುದು ಗೊತ್ತಿಲ್ಲ.ಅವರು ಸಲ್ಲಿಸಿರುವ ತಕರಾರು ಅರ್ಜಿಯ ಜೊತೆಗೆ ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಸಿಲ್ಲ. ಮುಂದಿನ ದಿನಗಳಲ್ಲಿ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.