
ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯ ಅಣ್ಣನನ್ನು ಕೊಂದು, ತಂದೆಯ ಮೇಲೂ ಹಲ್ಲೆ ನಡೆಸಿ ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಆರೋಪಿ ತೇಜಸ್ ಕೊಲ್ಲಂನ ಉಲಿಯಕೋವಿಲ್ ಪ್ರದೇಶದಲ್ಲಿರುವ ಫಿಬಿನ್ ಮತ್ತು ಆತನ ತಂದೆ ಗೋಮಾಸ್ ಅವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.ಫಿಬಿನ್ ಮೇಲೆ ಹಲವಾರು ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದು ಆತ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಬಂದಿದ್ದ. ಕೆಲವು ಮೀಟರ್ ದೂರ ಹೋದ ನಂತರ, ಅವರು ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಸ್ಥಳೀಯರು ಫಿಬಿನ್ ಮತ್ತು ಅವರ ತಂದೆ ಗೋಮಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಫಿಬಿನ್ ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದರು. ಅವರ ತಂದೆ ಗೋಮಾಸ್ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದಾದ ನಂತರ, ಆರೋಪಿ ತೇಜಸ್ ಹತ್ತಿರದ ರೈಲ್ವೆ ಹಳಿಗೆ ಹೋಗಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿ ತೇಜಸ್ ಎಸಿಪಿ ಶ್ರೇಣಿಯ ಪೊಲೀಸ್ ಅಧಿಕಾರಿಯ ಮಗ ಎಂದು ಹೇಳಲಾಗುತ್ತಿದೆ.ಆರೋಪಿ ತೇಜಸ್ ಮತ್ತು ಫಿಬಿನ್ ಸಹೋದರಿ ಒಟ್ಟಿಗೆ ಎಂಜಿನಿಯರಿಂಗ್ ಓದಿದ್ದರು, ನಂತರ ಫಿಬಿನ್ ಸಹೋದರಿ ಬ್ಯಾಂಕ್ ಕೋಚಿಂಗ್ ತೆಗೆದುಕೊಂಡು ಕೋಳಿಕ್ಕೋಡ್‌ನ ಖಾಸಗಿ ಬ್ಯಾಂಕಿನಲ್ಲಿ ಕೆಲಸ ಪಡೆದರು. ಎಂಜಿನಿಯರಿಂಗ್ ಮುಗಿಸಿದ ನಂತರ ಎರಡೂ ಕುಟುಂಬಗಳು ತಮ್ಮ ಮದುವೆಯ ಬಗ್ಗೆ ಮಾತನಾಡಿದರು.ಎರಡೂ ಕುಟುಂಬಗಳು ಇದಕ್ಕೆ ಒಪ್ಪಿಕೊಂಡಿದ್ದವು, ಆದರೆ ಕೆಲವು ದಿನಗಳ ಹಿಂದೆ, ಫಿಬಿನ್‌ನ ಸಹೋದರಿ ತನ್ನ ನಿರ್ಧಾರವನ್ನು ಬದಲಾಯಿಸಿದಳು ಮತ್ತು ತೇಜಸ್‌ನನ್ನು ಮದುವೆಯಾಗುವುದು ತನಗೆ ಇಷ್ಟವಿಲ್ಲವೆಂದು ಹೇಳಿದಳು.ತೇಜಸ್ಗೆ ಇದರ ಬಗ್ಗೆ ಚಿಂತೆ ಕಾಡುತ್ತಿತ್ತು, ಇದು ಆತನ ಪೊಲೀಸ್ ತರಬೇತಿ ಮೇಲೂ ಪರಿಣಾಮ ಬೀರಿತ್ತು. ದೈಹಿಕ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಖಿನ್ನತೆ ಶುರುವಾಗಿತ್ತು. ತಂದೆ ಆತನಿಗೆ ಕೌನ್ಸೆಲಿಂಗ್ ಮಾಡಿಸಿದರು ಆದರೂ ಯಾವುದೇ ಪ್ರಯೋಜನವಾಗಲಿಲ್ಲ.ಗೋಮಸ್ ಅವರ ಪತ್ನಿ, ಮಗಳು ತೇಜಸ್ ಅವರನ್ನು ಮದುವೆಯಾಗಲು ಬಯಸದಿದ್ದರೆ, ಅವರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಹೇಳಿದರು.ಫಿಬಿನ್‌ನ ಸಹೋದರಿ ತೇಜಸ್ ತನಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದಾಳೆ. ಇದಾದ ನಂತರ, ಫಿಬಿನ್ ತೇಜಸ್ ಗೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದರು. ತೇಜಸ್ ಫಿಬಿನ್ ಮನೆಗೆ ಹೋಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.