
ಬಳ್ಳಾರಿ, ಮಾರ್ಚ್ 18: ಬಳ್ಳಾರಿ (Ballari) ನಗರ ಶಾಸಕ ಭರತ್ ರೆಡ್ಡಿ (Bharath Reddy) ಅವರಿಗೆ ಬಾಂಬ್ ಬೆದರಿಕೆ ಸಂದೇಶವೊಂದು ಬಂದಿದೆ. ಕೂಡಲೆ ಶಾಸಕ ಭರತ್ ರೆಡ್ಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಬಳ್ಳಾರಿಯ ಗಾಂಧಿನಗರ ಪೊಲೀಸರು ಸಂದೇಶ ಕಳುಹಿಸಿರುವ ಸಂತೋಷ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ (ಮಾ.18) ತಡರಾತ್ರಿ ಕುಡಿದ ಮತ್ತಿನಲ್ಲಿ ಯುವಕ ಸಂತೋಷ, ಶಾಸಕ ಭರತ್ ರೆಡ್ಡಿ ಅವರಿಗೆ, ಬಳ್ಳಾರಿಯಲ್ಲಿರುವ ನಿಮ್ಮ ಕಚೇರಿಯಲ್ಲಿ ಬಾಂಬ್ ಇದೆ ಎಂದು ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ. ಕೂಡಲೇ, ಶಾಸಕ ಭರತ್ ರೆಡ್ಡಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ತನಿಖೆಗೆ ಇಳಿದ ಗಾಂಧಿನಗರ ಪೊಲೀಸರು ಯುವಕ ಸಂತೋಷನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಯುವಕ ಸಂತೋಷ ಮದ್ಯದ ಅಮಲಿನಲ್ಲಿ ಸಂದೇಶ ಕಳುಹಿಸಿರುವುದು ಧೃಡವಾಗಿದೆ. ಅದರೆ, ಯಾಕೆ ಈ ರೀತಿಯಾಗಿ ಸಂದೇಶ ಕಳುಹಿಸಿದ ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.
ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ
ಇತ್ತೀಚಿಗೆ ಮೈಸೂರು ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು. ಅನಾಮಿಕ ವ್ಯಕ್ತಿಯೋರ್ವ ಆಂಧ್ರ ಪ್ರದೇಶದಿಂದ ಕರೆ ಮಾಡಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಬಾಂಬ್ ಇಡುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದನು. ಬೆದರಿಕೆ ಕರೆ ಬರುತ್ತಿದ್ದಂತೆ ಮೈಸೂರು ರೈಲ್ವೆ ನಿಲ್ದಾಣದ ಪೋಲೀಸರು, ರೈಲ್ವೆ ಅಧಿಕಾರಿಗಳು ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಅಲರ್ಟ್ ಆಗಿದ್ದರು. ರೈಲ್ವೆ ಫ್ಲಾಟ್ಫಾರಂ ಹಾಗೂ ರೈಲುಗಳನ್ನು ಪರಿಶೀಲನೆ ನಡೆಸಿದ್ದರು. ಯಾವುದೇ ಅನುಹಾತ ಸಂಭಿಸಿರಲಿಲ್ಲ.
10 ಪ್ರಕರಣಗಳು ದಾಖಲು
ಬಾಂಬ್ ಬೆದರಿಕೆ ಕರೆ ಸಂಬಂಧ 2024ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ 10 ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದಕ್ಕೆ ದಾಖಲಾಗಿವೆ. 2024ರ ಅಕ್ಟೋಬರ್ 22 ರಿಂದ 26ರವರೆಗೆ ನಿರಂತರವಾಗಿ ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದರು.