World
Trending

ಟ್ರಂಪ್ ಸುಂಕಗಳು ಕಾನೂನುಬಾಹಿರ ಎಂದ ಅಮೆರಿಕ ಕೋರ್ಟ್

ಜಾಗತಿಕವಾಗಿ ಯುಎಸ್​​​ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳು ಕಾನೂನುಬಾಹಿರ ಎಂದು ಅಮೆರಿಕದ ಫೆಡರಲ್​​ ಮೇಲ್ಮನವಿ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಆದರೆ ಅವು ಸದ್ಯಕ್ಕೆ ಜಾರಿಯಲ್ಲಿರಲು ಅವಕಾಶ ಮಾಡಿಕೊಟ್ಟಿದೆ. ಜೊತೆಗೆ, ಈ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ಕಾನೂನು ಹೋರಾಟ ಮಾಡಲು ಸಮಯ ನೀಡಿದೆ. ಕೋರ್ಟ್​ ಆದೇಶಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್​, ಮೇಲ್ಮನವಿ ನ್ಯಾಯಾಲಯವು ‘ತಪ್ಪಾಗಿ’ ತೀರ್ಪು ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿರುವ ಮೇಲ್ಮನವಿ ನ್ಯಾಯಾಲಯ, ವ್ಯಾಪಕ ಸುಂಕ ವಿಧಿಸುವ ಕ್ರಮದಲ್ಲಿ ಟ್ರಂಪ್ ತಮ್ಮ​​ ತುರ್ತು ಆರ್ಥಿಕ ಅಧಿಕಾರದ ವ್ಯಾಪ್ತಿಯನ್ನು ಮೀರಿದ್ದಾರೆ ಎಂದಿದೆ. ಅಲ್ಲದೆ, ಅಕ್ಟೋಬರ್ ಮಧ್ಯದವರೆಗೆ ಸುಂಕಗಳು ಜಾರಿಯಲ್ಲಿರಲು ಅವಕಾಶ ನೀಡಿದೆ.

ದುಬಾರಿ ಸುಂಕಗಳನ್ನೇ ಆರ್ಥಿಕ ನೀತಿಯ ಸಾಧನವಾಗಿ ಬಳಸುತ್ತಿರುವ ಯುಎಸ್​ ಅಧ್ಯಕ್ಷರಿಗೆ ಕೋರ್ಟ್​ ತೀರ್ಪಿನಿಂದ ದೊಡ್ಡ ಹಿನ್ನಡೆಯಾದಂತಾಗಿದೆ. ಯುರೋಪಿಯನ್ ಒಕ್ಕೂಟದಂತಹ ಪ್ರಮುಖ ವ್ಯಾಪಾರ ಪಾಲುದಾರರೊಂದಿಗೆ ಟ್ರಂಪ್ ಮಾಡಿಕೊಂಡಿರುವ ಒಪ್ಪಂದಗಳು ಮುಂದುವರೆಯುವ ಬಗ್ಗೆಯೂ ಅನುಮಾನ ಮೂಡಿಸಿದೆ. ಒಂದು ವೇಳೆ, ಸುಪ್ರೀಂ ಕೋರ್ಟ್​ನಲ್ಲೂ ಟ್ರಂಪ್ ಪರ ತೀರ್ಪು ಬರದಿದ್ದರೆ, ಸುಂಕ ಜಾರಿ ಬಳಿಕ ಯುನೈಟೆಡ್ ಸ್ಟೇಟ್ಸ್ ಸಂಗ್ರಹಿಸಿದ ಶತಕೋಟಿ ಡಾಲರ್‌ ಹಣ ಏನಾಗಬಹುದು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ, ಶುಕ್ರವಾರದ ಈ ತೀರ್ಪು ಟ್ರಂಪ್ ಆಡಳಿತವು ಉಕ್ಕು, ಅಲ್ಯೂಮಿನಿಯಂ, ಆಟೋಗಳು ಮತ್ತು ಇತರ ಆಮದುಗಳ ಮೇಲೆ ವಿಧಿಸಿರುವ ವಲಯ-ನಿರ್ದಿಷ್ಟ ಸುಂಕಗಳಿಗೆ ಅನ್ವಯಿಸುವುದಿಲ್ಲ.

ಎಲ್ಲಾ ಸುಂಕಗಳು ಇನ್ನೂ ಜಾರಿಯಲ್ಲಿವೆ ಎಂದ ಟ್ರಂಪ್: ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಶುಕ್ರವಾರ ಮೇಲ್ಮನವಿ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಎಲ್ಲಾ ಸುಂಕಗಳು ಇನ್ನೂ ಜಾರಿಯಲ್ಲಿವೆ! ಅತ್ಯಂತ ಪಕ್ಷಪಾತದ ಮೇಲ್ಮನವಿ ನ್ಯಾಯಾಲಯವು ತಪ್ಪಾಗಿ ತೀರ್ಪು ನೀಡಿತು. ಆದರೆ ಕೊನೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವೇ ಗೆಲ್ಲುತ್ತದೆ ಎಂದು ಕೋರ್ಟ್​ಗೂ ತಿಳಿದಿದೆ. ನಾವು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡುತ್ತೇವೆ ಎಂದು ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ ಪೋಸ್ಟ್​ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸುಂಕಗಳು ಎಂದಾದರೂ ರದ್ದಾದರೆ, ಅದು ದೇಶಕ್ಕೆ ದೊಡ್ಡ ವಿಪತ್ತು. ಇದು ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸಲಿದೆ. ನಾವು ಬಲಶಾಲಿಯಾಗಿರಬೇಕು. ಯುಎಸ್ಎ ಇನ್ನು ಮುಂದೆ ಅಗಾಧವಾದ ವ್ಯಾಪಾರ ಕೊರತೆ, ಅನ್ಯಾಯದ ಸುಂಕಗಳು ಮತ್ತು ನಮ್ಮ ತಯಾರಕರು, ರೈತರು ಹಾಗೂ ಎಲ್ಲರನ್ನೂ ದುರ್ಬಲಗೊಳಿಸುವ ಇತರ ದೇಶಗಳು, ಸ್ನೇಹಸಂಬಂಧವಿರುವ ಇಲ್ಲವೇ, ವೈರಿ ದೇಶಗಳಿಂದ ವಿಧಿಸಲಾದ ಸುಂಕೇತರ ವ್ಯಾಪಾರ ಅಡೆತಡೆಗಳನ್ನು ಸಹಿಸುವುದಿಲ್ಲ ಎಂದು ಟ್ರಂಪ್​ ತಿಳಿಸಿದ್ದಾರೆ.

ಸುಂಕಗಳು ನಮ್ಮ ಕಾರ್ಮಿಕರಿಗೆ ನೆರವಾಗಲು ಮತ್ತು ಉತ್ತಮ ದರ್ಜೆಯ ಅಮೆರಿಕ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳನ್ನು ಬೆಂಬಲಿಸಲು ಅತ್ಯುತ್ತಮ ಸಾಧನವಾಗಿವೆ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕ. ಹಲವು ವರ್ಷಗಳಿಂದ, ನಮ್ಮ ಕಾಳಜಿಯಿಲ್ಲದ ಮತ್ತು ಅವಿವೇಕಿ ರಾಜಕಾರಣಿಗಳು ನಮ್ಮ ವಿರುದ್ಧ ಸುಂಕ ಹೇರಲು ಅನುಮತಿಸಿದ್ದರು. ಈಗ, ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ಸಹಾಯದಿಂದ, ಸುಂಕಗಳನ್ನು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಅಮೆರಿಕವನ್ನು ಮತ್ತೆ ಶ್ರೀಮಂತ, ಬಲಿಷ್ಠ ಮತ್ತು ಶಕ್ತಿಶಾಲಿ ರಾಷ್ಟ್ರವಾಗಿ ಮಾಡಲು ಬಳಸುತ್ತೇವೆ! ಧನ್ಯವಾದಗಳು ಎಂದು ಅವರು ಟ್ರೂತ್ ಸೋಷಿಯಲ್‌ನಲ್ಲಿ ಬರೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button