ಇತ್ತೀಚಿನ ಸುದ್ದಿ

ಸಿಎಂ ಕೈಯಿಂದ ಕಾಯಮಾತಿ ಪತ್ರ ಕೊಡಿಸ್ತೇವೆಂದು ಪೌರಕಾರ್ಮಿಕರಿಗೆ ವಂಚನೆ, ತಲಾ 5 ಸಾವಿರದಂತೆ ವಸೂಲಿ

ಕೆಲಸ ಕಾಯಂ ಆಗಬೇಕು ಎಂದು ಅದೆಷ್ಟೋ ವರ್ಷಗಳಿಂದ ಹೋರಾಟ ನಡೆಸಿದ್ದ ಪೌರಕಾರ್ಮಿಕರ ಕೂಗಿಗೆ ಸರ್ಕಾರ ಕೂಡ ಸ್ಪಂದಿಸಿದೆ. ಆದರೆ, ಇದೀಗ ಅದೇ ವಿಚಾರ ಮುಂದಿಟ್ಟುಕೊಂಡು ಮೇಸ್ತ್ರಿಗಳ ಮೂಲಕ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪೌರಕಾರ್ಮಿಕರಿಗೆ ಸಿಎಂ ಕೈಯಿಂದಲೇ ಕಾಯಂ ಪತ್ರ ಕೊಡಿಸ್ತೀವೆ ಅಂತಾ ಮೇಸ್ತ್ರಿಗಳ ಮೂಲಕ ಪೌರಕಾರ್ಮಿಕರ ಬಳಿ ಹಣ ವಸೂಲಿ ಮಾಡ್ತಿರೋ ವಿಡಿಯೋ ಇದೀಗ ಸಂಚಲನ ಸೃಷ್ಟಿಸಿದೆ.

ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು (Pourakarmikas) ಕೆಲಸ ಕಾಯಂ ಮಾಡಿ ಎಂದು ಆಗಾಗ ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಇದೀಗ ಇದೇ ವಿಚಾರವನ್ನು ಬಂಡವಾಳ ಮಾಡಿಕೊಂಡ ಕೆಲ ಗುತ್ತಿಗೆದಾರರು ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಕೆಲವರು ಮೇಸ್ತ್ರಿಗಳ ಮೂಲಕ ಪೌರಕಾರ್ಮಿಕರ ಬಳಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇದೇ ಏಪ್ರಿಲ್ 3 ರಂದು ಸಿಎಂ ಸಿದ್ದರಾಮಯ್ಯ (Siddaramaiah) ಕೈಯಲ್ಲೇ ಕಾಯಮಾತಿ ಪತ್ರ ಕೊಡಿಸುತ್ತೇವೆ ಎಂದು ಪ್ರತಿವಾರ್ಡ್​​ನಲ್ಲಿ ಪೌರಕಾರ್ಮಿಕರಿಂದ ತಲಾ 5 ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾದ ವಿಡಿಯೋ ಇದೀಗ ಪೌರಕಾರ್ಮಿಕ ಮುಖಂಡರನ್ನು ಕೆರಳುವಂತೆ ಮಾಡಿದೆ.ಮೈಸೂರು ನಾರಾಯಣ ಎಂಬ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಹಾಗೂ ಕೆಲ ಮೇಸ್ತ್ರಿಗಳು ಪೌರಕಾರ್ಮಿಕರಿಂದ ತಲಾ 5 ಸಾವಿರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ ಎಂದು ಪೌರಕಾರ್ಮಿಕ ಮುಖಂಡ ತ್ಯಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ. ಏಪ್ರಿಲ್ 3ನೇ ತಾರಿಕು ಕಾಯಂ ಪತ್ರ ಕೊಡಿಸುತ್ತೇವೆ ಎಂದು ಪೌರಕಾರ್ಮಿಕರಿಗೆ ಸುಳ್ಳು ಭರವಸೆ ನೀಡ್ತಿದ್ದಾರೆ ಎಂದು ಕಿಡಿಕಾರಿರುವ ಅವರು, ಈ ಬಗ್ಗೆ ಬಿಬಿಎಂಪಿಯ ಆಯುಕ್ತರು ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.ಖಾಸಗಿ ಕಾರ್ಯಕ್ರಮಕ್ಕೆ ಪೌರಕಾರ್ಮಿಕರನ್ನುಸೇರಿಸಲು ಪ್ಲಾನ್ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ತ್ಯಾಗರಾಜ್, ಇತ್ತ ಪ್ರತಿವಾರ್ಡ್​​ನ ಪೌರಕಾರ್ಮಿಕರ ಬಳಿ ಹಣ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲು ಸಜ್ಜಾಗಿರುವ ಪೌರಕಾರ್ಮಿಕರ ಮುಖಂಡರು, ಬಿಬಿಎಂಪಿ ಹೆಸರಲ್ಲಿ, ಸರ್ಕಾರದ ಹೆಸರಲ್ಲಿ ಪೌರಕಾರ್ಮಿಕರಿಗೆ ವಂಚನೆ ಮಾಡಲು ಹೊರಟಿರುವವರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.ಸದ್ಯ ಬಿಬಿಎಂಪಿಯ ಎಂಟು ವಲಯಗಳಲ್ಲಿ ಸಾವಿರಾರು ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇತ್ತ ಸರ್ಕಾರ ಕೂಡ ಆಯ್ದ ಪೌರಕಾರ್ಮಿಕರಿಗೆ ಕೆಲಸ ಕಾಯಂ ಮಾಡುವ ಭರವಸೆ ನೀಡಿದೆ. ಆದರೆ, ಕಾಯಂ ಆಗಿರುವವರು ಯಾರೆಲ್ಲ ಎಂಬುದನ್ನು ಪ್ರಕಟಿಸುವ ಮೊದಲೇ ಕೆಲಸ ಕಾಯಂ ಆಮಿಷವೊಡ್ಡಿ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ಇತ್ತ ಹಣ ನೀಡಿದ ವಿಚಾರ ಬಯಲು ಮಾಡಿದರೆ ಕಾಯಂ ಪಟ್ಟಿಯಿಂದ ಹೆಸರು ತೆಗೆಯುತ್ತೇವೆ ಎಂದು ಪೌರಕಾರ್ಮಿಕರಿಗೆ ಧಮ್ಕಿ ಹಾಕಿರುವ ಆರೋಪ ಕೂಡ ಕೇಳಿಬಂದಿದ್ದು, ಸದ್ಯ ಈ ಬಗ್ಗೆ ಪಾಲಿಕೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button