ಇತ್ತೀಚಿನ ಸುದ್ದಿ

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಉದ್ಯಾನ, ಮೈದಾನ ಹಾಗೂ ಕೆರೆಗಳ ಸ್ಥಿತಿಗತಿಯ ವರದಿ ಕೊಡಲು ಸೂಚನೆ: ತುಷಾರ್ ಗಿರಿ ನಾಥ್.

ಬೆಂಗಳೂರು: ಡಿ.10: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳು, ಮೈದಾನಗಳು ಹಾಗೂ ಕೆರೆಗಳ ಸ್ಥಿತಿ-ಗತಿಯ ಕುರಿತಂತೆ ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಕ್ಷಿಣ ವಲಯ ವ್ಯಾಪ್ತಿಯಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ”ಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ವೇಳೆ ಮಾತನಾಡಿದ ಅವರು, ಉದ್ಯಾನಗಳು, ಮೈದಾನಗಳು ಹಾಗೂ ಕೆರೆಗಳಿಗೆ ಸಂಬಂಧಿಸಿದಂತೆ ಪ್ರತಿ ಸ್ಥಳಕ್ಕೂ ಅಧಿಕಾರಿಗಳು ಖುದ್ದಾಗಿ ಭೇಟಿ ನಿಡಿ ಜಿಯೋ ಲೊಕೇಶನ್ ಸಮೇತ ಛಾಯಾಚಿತ್ರ ತೆಗೆದು ಇರುವ ಸ್ಥಿತಿ-ಗತಿಯ ಕುರಿತು ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಅನಧಿಕೃತ ವ್ಯಾಪಾರಗಳನ್ನು ತೆರವುಗೊಳಿಸಿ:

ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ, ವ್ಯಾಪಾರಿಗಳಿಗಾಗಿ ಕಟ್ಟೆಗಳನ್ನು ನಿರ್ಮಾಣ ಮಾಡಲಾಗಿದ್ದು, ಅದನ್ನು ಹೊರತುಪಡಿ ಬೇರೆ ಕಡೆ ವ್ಯಾಪಾರ ಮಾಡುವವರನ್ನು ತೆರವುಗೊಳಿಸಬೇಕು. ಪಾಲಿಕೆಯಿಂದ ಅನುಮತಿ ನೀಡಿರುವ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲು ಸೂಚನೆ ನೀಡಿದರು. ಇನ್ನು ಇದೇ ಶನಿವಾರ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿರುವ ಹಾಗೂ ಶಾಶ್ವತ ಪೆಟ್ಟಿಗಳನ್ನಿಟ್ಟುಕೊಂಡು ವ್ಯಾಪಾರಾ ಮಾಡುವುದನ್ನು ತೆರವುಗೊಳಿಸಲು ಸೂಚನೆ ನೀಡಿದರು.

ವಾಣಿಜ್ಯ ಚಟುವಟಿಕೆಗಳ ಮೇಲೆ ಕ್ರಮ ಕೈಗೊಳ್ಳಿ:

ಚಿಕ್ಕಪೇಟೆ ವ್ಯಾಪ್ತಿಯಲ್ಲಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಾಗಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಅದನ್ನು ಬಗೆಹರಿಸಲು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಕೂಡಲೆ ಸ್ಥಳ ಪರಿಶೀಲಿಸಿ ವಾಣಿಜ್ಯ ಚಟುವಟಿಕೆಗಳು ನಡೆಸುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ವಲಯ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ಸಮುದಾಯ ಭವನ ತೆರೆಯಲು ಕ್ರಮವಹಿಸಿ:

ಜಯನಗರದ ಗುರಪ್ಪನ ಪಾಳ್ಯದಲ್ಲಿ 4 ಅಂತಸ್ತಿನ ಸಮುದಾಯ ಭವನ ನಿರ್ಮಾಣ ವಾಗಿ 4 ವರ್ಷಗಳಾಗಿದೆ. ಆದರೆ ಇನ್ನೂ ಸಮುದಾಯ ಭವನ ತೆರೆದಿಲ್ಲ, ಅದನ್ನು ತೆರವುಗೊಳಿಸಲು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬಾಕಿ ಕಾಮಗಾರಿಗೆ ಅದಾಂಜು ಪಟ್ಟಿ ಸಿದ್ದಪಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ತ್ವರಿತವಾಗಿ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಲು ಸೂಚನೆ ನೀಡಿದರು.

ಬಹುತೇಖ ದೂರುಗಳನ್ನು ಬಗೆಹರಿಸಲಾಗಿದೆ:

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಡೆದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಬಂದಂತಹ ದೂರುಗಳಲ್ಲಿ ಬಹುತೇಖ ದೂರುಗಳನ್ನು ಬಗೆಹರಿಸಲಾಗಿದ್ದು, ಬಾಕಿಯಿರುವ ದೂರುಗಳನ್ನು ಶೀಘ್ರ ಗತಿಯಲ್ಲಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ಇಂದು 45ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದ್ದು, ಕಾಲಮಿತಿಯೊಳಗಾಗಿ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು:

  1. ದೊಡ್ಡ ಗಣಪತಿ ದೇವಸ್ಥಾನದ ಬಳಿ ಹೈಟೆಕ್ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ಮನವಿ.
  2. ಎಲ್.ಇ.ಡಿ ನಾಮಫಲಕಗಳನ್ನು ಅಳವಡಿಸಿದ್ದು, ಅದನ್ನು ತೆರವುಗೊಳಿಸಲು ಮನವಿ.
  3. ಮನೆಗಿಂತ ರಸ್ತೆ ಎತ್ತರಿಸಿರುವ ಕಾರಣ ಮನೆಗೆ ನೀರು ಬರುತ್ತಿದ್ದು, ಅದನ್ನು ತಪ್ಪಿಸಲು ಮನವಿ.
  4. ಅಪಾಯ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಮನವಿ.
  5. ರಸ್ತೆ ಬದಿ ಕಸ ಬಿಸಾಡುವುದನ್ನು ತಪ್ಪಿಸಲು ಮನವಿ.
  6. ವಿವಿ ಪುರಂ ಜಂಕ್ಷನ್ ನಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಅದನ್ನು ತಪ್ಪಿಸಲು ಮನವಿ.
  7. ಬಿಡಾಡಿ ದನಗಳು ರಸ್ತೆ ಮೇಲೆ ಬರಲಿದ್ದು, ಅದನ್ನು ನಿಯಂತ್ರಿಸಲು ಮನವಿ.
  8. ರಸ್ತೆ ಬದಿ ಕಟ್ಟಡ ಭಗ್ನಾವಶೇಷಗಳನ್ನು ಹಾಕುತ್ತಿದ್ದು, ಅದನ್ನು ನಿಯಂತ್ರಿಸಲು ಮನವಿ.
  9. ಬ್ಯಾಟರಾಯಪುರ ರಸ್ತೆಯಲ್ಲಿ ರಸ್ತೆ ಗುಂಡಿಯನ್ನು ಮುಚ್ಚಲು ಮನವಿ
  10. ಸೌತ್ ಎಂಡ್ ವೃತ್ತದ ಸರ್ವೀಸ್ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಮನವಿ.

ಈ ವೇಳೆ ವಲಯ ಆಯುಕ್ತರಾದ ವಿನೋತ್ ಪ್ರಿಯಾ, ವಲಯ ಜಂಟಿ ಆಯುಕ್ತರಾದ ಶಿವಕುಮಾರ್, ಉಪ ಆಯುಕ್ತರಾದ ಡಿ.ಕೆ ಬಾಬು, ಕಾರ್ಯಪಾಲಕ ಅಭಿಯಂತರರು, ಪಾಲಿಕೆ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button