ಜಕ್ಕರಾಯನ ಕೆರೆ ಆಟದ ಮೈದಾನದಲ್ಲಿ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ: ತುಷಾರ್ ಗಿರಿ ನಾಥ್.
ಸುಭಾಷ್ ನಗರ ರೈಲ್ವೆ ಅಪ್ರೋಚ್ ರಸ್ತೆ ಬಳಿ ಜಕ್ಕರಾಯನ ಕೆರೆ ಆಟದ ಮೈದಾನದಲ್ಲಿ ಎರಡು ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕಗಳನ್ನು ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ, ಮುರಳಿ ಎಂಬುವವರು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸುಭಾಷ್ ನಗರ ವ್ಯಾಪ್ತಿಯ ರೈಲ್ವೆ ಅಪ್ರೋಚ್ ರಸ್ತೆ(ಮಂತ್ರಿ ಮಾಲ್ ಹತ್ತಿರ)ಯಲ್ಲಿ ಸುಮಾರು 5 ಎಕರೆ ಪ್ರದೇಶದ ಜಕ್ಕರಾಯನ ಕೆರೆ ಆಟದ ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ 6000ಕ್ಕೂ ಹೆಚ್ಚು ಅನಾಥ ವಾಹನಗಳನ್ನು ನಿಲ್ಲಿಸಿದ್ದು, ಇಲ್ಲಿ ಸ್ವಚ್ಛತೆ ಕಾಪಾಡದ ಕಾರಣ ಅಕ್ಕ-ಪಕ್ಕದ ಮನೆಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅದನ್ನು ಪಾಲಿಕೆ ವಶಕ್ಕೆ ಪಡೆದು ಇರುವ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಿದರು.
ಜಕ್ಕರಾಯನ ಕೆರೆ ಆಟದ ಮೈದಾನದ ವಿಚಾರವಾಗಿ ಪ್ರತಿಕ್ರಿಯಿಸಿ, ವಲಯ ಆಯುಕ್ತರು ಹಾಗೂ ವಲಯ ಜಂಟಿ ಆಯುಕ್ತರು ಪೊಲೀಸ್ ಇಲಾಖೆಯ ಜೊತೆ ಮಾತನಾಡಿ, ಮೈದಾನದಲ್ಲಿ ನಿಲ್ಲಿಸಿರುವ ಎಲ್ಲಾ ವಾಹನಗಳನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಗಾಂಧಿನಗರ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಗಳಿಗೆ ಪ್ರತ್ಯೇಖವಾಗಿ ದ್ವಿತೀಯ ಹಂತದ ಟ್ರಾನ್ಸ್ಫರ್ ಸ್ಟೇಷನ್ ನಿರ್ಮಾಣ ಮಾಡುವುದರ ಜೊತೆಗೆ ಗಾರ್ಡನ್ ನಿರ್ಮಾಣ ಮಾಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಜೋನ್ ಗುರುತಿಸಿ:
ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡುವುದನ್ನು ತೆರವುಗೊಳಿಸಲಾಗಿದ್ದು, ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಲು ಮನವಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ, ವ್ಯಾಪಾರ ವಲಯಗಳಲ್ಲದ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ. ಪಾಲಿಕೆ ವತಿಯಿಂದ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರತ್ಯೇಖವಾಗಿ ವ್ಯಾಪಾರ ವಲಯ(ವೆಂಡಿಂಗ್ ಜೋನ್)ಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಶೀಘ್ರ ಸಮೀಕ್ಷೆ ನಡೆಸಿ ವೆಂಡಿಂಗ್ ಜೋನ್ ಗಳನ್ನು ಗುರುತಿಸಲು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.
ನಿರ್ಮಾಣ ಹಂತದ ಒಂಟಿ ಮನೆಗಳ ಪಟ್ಟಿ ಕೊಡಿ:
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಒಂಟಿ ಮನಗೆಳ ಯೋಜನೆಯಡಿ ಅರ್ಧಕ್ಕೆ ನಿಂತಿರುವ ಒಂಟಿ ಮನೆಗಳನ್ನು ಸಮೀಕ್ಷೆ ನಡೆಸಿ, ಅದನ್ನು ಜಿಪಿಎಸ್ ಸಹಿತ ಛಾಯಾಚಿತ್ರಗಳನ್ನು ತೆಗೆದು ಪಟ್ಟಿ ಸಿದ್ದಪಡಿಸಬೇಕು. ಅನಂತರ ಅರ್ಧಕ್ಕೆ ನಿಂತಿರುವ ಒಂಟಿ ಮನೆಗಳಿಗೆ ಬಾಕಿ ನೀಡಬೇಕಿರುವ ಅನುದಾನವನ್ನು ಕೂಡಲೆ ನೀಡುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಜೀವನೋಪಾಯಕ್ಕೆ ಸೌಲಭ್ಯ ಕಲ್ಪಿಸಿ:
ವಿಕಲ ಚೇತನೆಯಾಗಿರುವುದರಿಂದ ಜೀವನ ಸಾಗಿಸಲು ಕಷ್ಟವಾಗುತ್ತಿದ್ದು, ಕಲ್ಯಾಣ ಕಾರ್ಯಕ್ರಮದಡಿ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ, ಕಲ್ಯಾಣ ಯೋಜನೆಯ ಅಡಿ ಜೀವನೋಪಾಯಕ್ಕಾಗಿ ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ರಾಜಕಾಲುವೆ ಮೇಲೆ ನಿರ್ಮಾಣ ಮಾಡಿರುವ ಅಂಗಡಿ ತೆರವುಗೊಳಿಸಿ:
ಕೆ.ಆರ್ ಮಾರುಕಟ್ಟೆ ಕಾಂಪ್ಲೆಕ್ಸ್ ಮುಖ್ಯದ್ವಾರದ ಬಳಿಯಿರುವ ರಾಜಕಾಲುವೆ ಮೇಲೆ ಅಂಗಡಿ ನಿರ್ಮಿಸಿದ್ದು, ಇದರಿಂದ ಸಾರ್ವಜನಿಕರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಅದನ್ನು ಬಗೆಹರಲಿಸಲು ಮನವಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ, ವಲಯ ಮುಖ್ಯ ಅಭಿಯಂತರರು ಹಾಗೂ ರಾಜಕಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರರು ಸ್ಥಳ ಪರಿಶೀಲಿಸಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ಸೂಚಿಸಿದರು.
67 ದೂರುಗಳ ಸ್ವೀಕಾರ:
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ 67 ದೂರುಗಳು ಬಂದಿದ್ದು, ದೂರುಗಳಿಗೆ ಸಂಬಂಧಿಸಿದಂತೆ ಆಯಾ ಸಂಬಂಧಪಟ್ಟ ಅಧಿಕಾರಿಗಳು ಕಾಲಮಿತಿಯೊಳಗಾಗಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.
ಸಾರ್ವಜನಿಕರ ಕುಂದು-ಕೊರತೆಗಳು ಪ್ರಮುಖ ಅವಹಾಲುಗಳು:
- ಕೋದಂಡರಾಮಪುರದಲ್ಲಿರುವ ಸಮುದಾಯ ಭವನವನ್ನು ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲು ಮನವಿ.
- ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಲು ಮನವಿ.
- ಅನಧಿಕೃತ ಕಟ್ಟಡ ತೆರವುಗೊಳಿಸಲು ಮನವಿ.
- ರಾಮಮಂದಿರ ವಾರ್ಡ್ನಲ್ಲಿ ಪಾದಚಾರಿ ಒತ್ತುವರಿಯನ್ನು ತೆರವುಗೊಳಿಸಲು ಮನವಿ.
- ಕಲ್ಯಾಣ ಕಾರ್ಯಕ್ರಮದಡಿ ಯೋಜನೆಗಳನ್ನು ಒದಗಿಸಲು ಮನವಿ.
- ಇ-ಖಾತಾ ಪಡೆಯಲು ಸಮಸ್ಯೆಯಾಗುತ್ತಿದ್ದು, ಶೀಘ್ರವಾಗಿ ಇ-ಖಾತಾ ಕೊಡಿಸಲು ಮನವಿ.
- ರಸ್ತೆ ಬದಿ ಕಾಂಪ್ಯಾಕ್ಟರ್ ಗಳಿಗೆ ಕಸ ವರ್ಗಾವಣೆ ಮಾಡುತ್ತಿದ್ದು, ಅದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಅದನ್ನು ತಪ್ಪಿಸಲು ಮನವಿ.
- ಕಾವೇರಿ ಜಂಕ್ಷನ್ ಬಳಿಯಿರುವ ಮ್ಯಾಜಿಕ್ ಬಾಕ್ಸ್(ಕೆಳ ಸೇತುವೆ) ಸಮಯ ನಿಗದಿಪಡಿಸಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಅದನ್ನು ಬಗೆಹರಿಸಲು ಮನವಿ.
- ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಮನವಿ.
- ಸ್ಯಾಂಕೀ ರಸ್ತೆ ಅಗಲೀಕರಣ ಮಾಡುವ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳಲು ಮನವಿ.
ಈ ವೇಳೆ ವಲಯ ಜಂಟಿ ಆಯುಕ್ತರಾದ ಸಂಗಪ್ಪ, ಮುಖ್ಯ ಅಭಿಯಂತರರಾದ ಶಶಿ ಕುಮಾರ್, ಉಪ ಆಯುಕ್ತರಾದ ಶ್ರೀನಿವಾಸ್, ಆರೋಗ್ಯಾಧಿಕಾರಿ, ಕಾರ್ಯಪಾಲಕ ಅಭಿಯಂತರರು, ಪಾಲಿಕೆ, ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.