ಇತ್ತೀಚಿನ ಸುದ್ದಿ

ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ: ತುಷಾರ್ ಗಿರಿ ನಾಥ್

ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಆಯುಕ್ತರ ನಡೆ ಕಾರ್ಯಕ್ರಮದಡಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಇಂದು ವಲಯ ಕಛೇರಿಯ ಸಭಾಂಗಣ ಕೊಠಡಿಯಲ್ಲಿ 40ಕ್ಕೂ ಹೆಚ್ಚು ಸಾರ್ವಜನಿಕರಿಂದ 50ಕ್ಕೂ ಹೆಚ್ಚು ಕುಂದು-ಕೊರತೆಗಳನ್ನು ಆಲಿಸಿದರು.

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಾಗರೀಕರಿಂದ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಸಹಾಯ 2.0 ತಂತ್ರಾಂಶದಲ್ಲಿ ಬರುವ ದೂರುಗಳಿಗೆ ಹೆಚ್ಚು ಆದ್ಯತೆ ನೀಡಿ ನಿಗದಿತ ಸಮಯದೊಳಗಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಹವಾಲು ಸ್ವಿಕಾರದ ವೇಳೆ ಪಾದಚಾರಿ ಮಾರ್ಗ ಒತ್ತುವರಿ, ರಸ್ತೆ ಬದಿ ತ್ಯಾಜ್ಯ ಬಿಸಾಡುವ, ಅನಧಿಕೃತ ಕಟ್ಟಡಗಳ ನಿರ್ಮಾಣ ಸಂಬಂಧಿಸದಿದಂತೆ ಹೆಚ್ಚು ದೂರುಗಳು ಬಂದಿದ್ದು, ಹೆಚ್ಚು ದೂರುಗಳು ಬಂದಿರುವ ಬಗ್ಗೆ ಗಮನ ಹರಿಸಿ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

“ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮದಲ್ಲಿ ನಾಗರೀಕರಿಂದ ಬಂದ ಪ್ರಮುಖ ಅಹವಾಲುಗಳು:

  1. ಜಯನಗರದ ಮಾದವನ್ ಪಾರ್ಕ್ ವೃತ್ತದ ಬಳಿ ಸೈಡ್ ಡ್ರೈನ್ ಸ್ವಚ್ಛತೆ ಮಾಡಿಲ್ಲ, ಅದನ್ನು ಸರಿಪಡಿಸಲು ಮನವಿ.

ಮುಖ್ಯ ಆಯುಕ್ತರ ಪ್ರತಿಕ್ರಿಯೆ: ಪ್ರಮುಖ ರಸ್ತೆಗಳ ಬದಿ ಸೈಡ್ ಡ್ರೈನ್‌ಗಳಲ್ಲಿ ಸ್ವಚ್ಛತೆ ಪ್ರತ್ಯೇಖ ಅನುದಾನ ಮೀಸಲಿಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೂಳೆತ್ತಿ ಸ್ವಚ್ಛತೆ ಮಾಡಬೇಕು. ಅಲ್ಲದೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಮುಖ ರಸ್ತೆಗಲ್ಲಿ ಸ್ವಚ್ಛತಾ ಅಭಿಯಾನ ನಡೆಸಬೇಕೆಂದು ಸೂಚನೆ ನೀಡಿದರು.

  1. ಕುಮಾರಸ್ವಾಮಿ ಲೇಔಟ್ ಖಾಲಿ ಸ್ಥಳದಲ್ಲಿ ಕಸ ಹಾಕುತ್ತಿದ್ದು, ಆ ಸಮಸ್ಯೆಯನ್ನು ಬಗೆಹರಿಸಲು ಮನವಿ.

ಪ್ರತಿಕ್ರಿಯೆ: ಖಾಲಿ ಜಾಗದ ಮಾಲೀಕರಿಗೆ ಕೂಡಲೆ ನೋಟೀಸ್ ಜಾರಿ ಮಾಡಿ ಸ್ವಚ್ಛಗೊಳಿಸಲು ಸೂಚನೆ ನೀಡಬೇಕು. ಇಲ್ಲವಾದಲ್ಲಿ ಪಾಲಿಕೆ ವತಿಯಿಂದ ಸ್ವಚ್ಛಗೊಳಿಸಿ ಮಾಲೀಕರಿಂದ ವೆಚ್ಚ ವಸೂಲಿ ಮಾಡಿ ಮತ್ತೆ ಈ ರೀತಿ ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

  1. ವಿಜಯನಗರ ವ್ಯಾಪ್ತಿಯ ಹಂಪಿನಗರ ಪೈಪ್ ಲೈನ್ ರಸ್ತೆಯಲ್ಲಿ ರಾಜಕಾಲುವೆ ಪಕ್ಕದ ಬಫರ್ ಜೋನ್ ನಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲು ಮನವಿ.

ಪ್ರತಿಕ್ರಿಯೆ: ಸ್ಥಳ ಪರಿಶೀಲಿಸಿ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

  1. ಬಸವನಗುಡಿ ಡಿವಿಜಿ ರಸ್ತೆಯ ಅಬಲ ಆಶ್ರಮದ ಬಳಿಯ ಖಾಲಿ ಜಾಗದಲ್ಲಿ ಮರ ಅಪಾಯದ ಸ್ಥಿತಿಯಲ್ಲಿದ್ದು, ಅದನ್ನು ಕೂಡಲೆ ತೆರವುಗೊಳಿಸಲು ಹಾಗೂ ಕಲ್ಯಾಣ ಮಂಟಪಗಳಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಸುತ್ತಿದ್ದು, ಅದನ್ನು ತಡೆಯಲು ಮನವಿ.

ಪ್ರತಿಕ್ರಿಯೆ: ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಮರ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಇನ್ನು ವಾರ್ಡ್ ಅಧಿಕಾರಿಗಳು ಕಲ್ಯಾಣ ಮಂಟಪಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಬಳಸದಂತೆ ಸುಚನೆ ನೀಡಬೇಕು.

  1. ಚಿಕ್ಕಪೇಟೆಯ ಗೋವಿಂದಪ್ಪ ರಸ್ತೆಯಲ್ಲಿ ಮರ ಬೀಳುವ ಸ್ಥಿತಿಯಲ್ಲಿದ್ದು, ಅದನ್ನು ತೆರವುಗೊಳಿಸಲು ಮನವಿ.

ಪ್ರತಿಕ್ರಿಯೆ: ಅರಣ್ಯ ವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮರದ ಸ್ಥಿತಿಯನ್ನು ಪರಿಶೀಲಿಸಿ, ಮರ ಸುಸ್ಥಿತಿಯಲ್ಲಿದ್ದರೆ ಹಿಂಬರಹ ನೀಡಬೇಕು. ಇಲ್ಲವಾದಲ್ಲಿ ಮರ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

  1. ಬಸವನಗುಡಿ ಸುಂಕೇನಹಳ್ಳಿ ಬಳಿ ಮನೆ ಪಕ್ಕದಲ್ಲಿ ತ್ಯಾಜ್ಯ ಬಿಸಾಡುತ್ತಿದ್ದು, ಬೀದಿ ದೀಪ ಕೂಡಾ ಅಳವಡಿಸಿಲ್ಲ ಅದನ್ನು ಸರಿಪಡಿಸಲು ಮನವಿ.

ಪ್ರತಿಕ್ರಿಯೆ: ಸ್ಥಳ ಪರಿಶೀಲಿಸಿ ಸ್ವಚ್ಛತೆ ಕಾಪಾಡಬೇಕು ಹಾಗೂ ಬೀದಿ ಬೀದಿ ದೀಪ ಅಳವಡಿಸಲು ಸೂಚನೆ ನೀಡಿದರು.

  1. ವಿಜಯನಗರ ಮಾಗಡಿ ರಸ್ತೆ ಜಿ.ಟಿ ಮಾಲ್ ಬಳಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಲು ಹಾಗು ರಸ್ತೆ ಬದಿ ಕಸ ಬಿಸಾಡದಂತೆ ಮನವಿ ಮಾಡಿದರು.

ಪ್ರತಿಕ್ರಿಯೆ: ಪಾದಚಾರಿ ಮಾರ್ಗ ಒತ್ತುವರಿಯನ್ನು ಕೂಡಲೆ ತೆರವುಗೊಳಿಸಬೇಕು. ಮತ್ತೆ ಆ ಜಾಗದಲ್ಲಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಪಾದಚಾರಿ ಮಾರ್ಗದಲ್ಲಿ ಶಾಶ್ವತವಾಗಿ ಅಳವಡಿಸಿರುವ ಪೆಟ್ಟಿಗೆ ಅಂಗಡಿಗಳನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ರಸ್ತೆ ಬದಿ ಕಸ ಬಿಸಾಡುವ ವಿಚಾರವಾಗಿ ಮಾರ್ಷಲ್‌ಗಳು ಗಸ್ತು ತಿರುಗಿ ಎಚ್ಚರಿಗೆ ನಿಡುವುದರ ಜೊತೆಗೆ ಕಸ ಬಿಸಾಡುವವರಿಗೆ ದಂಡ ವಿಧಿಸಲು ಸೂಚನೆ ನೀಡಿದರು.

  1. ವಿಲ್ಸನ್ ಗಾರ್ಡನ್ ನಲ್ಲಿ ಸಣ್ಣ-ಸಣ್ಣ ರಸ್ತೆಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದನ್ನು ನಿಲ್ಲಿಸಲು ಮನವಿ.

ಪ್ರತಿಕ್ರಿಯೆ: ಅಧಿಕಾರಿಗಳು ಕೂಡಲೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕು. ಜೊತೆಗೆ ಸಣ್ಣ-ಸಣ್ಣ ರಸ್ತೆಗಳಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಸುತ್ತಿರುವುದನ್ನು ನಿಲ್ಲಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.

  1. ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ಹೆಚ್ಚಾಗುತ್ತಿದ್ದು, ಅದನ್ನು ತೆರವುಗೊಳಿಸಲು ಮನವಿ.

ಪ್ರತಿಕ್ರಿಯೆ: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಕ್ಷೆ ವ್ಯತಿರಿಕ್ತವಾಗಿ ನಿರ್ಮಾಣ ಮಾಡುತ್ತಿರುವ ಹಾಗೂ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಾಣ ಮಾಡುತ್ತಿರುವ ಅನಧಿಕೃತ ಕಟ್ಟಡಗಳ ಮೇಲೆ ನಿಯಮಾನುಸಾರ ಕ್ರಮ ಕೈಗೊಂಡು ತೆರವು ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದರು.

  1. ಜಯನಗರ ವ್ಯಾಪ್ತಿಯಲ್ಲಿ ರಾಜಕಾಲುವೆ ಮೇಲೆ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲು ಮನವಿ.

ಪ್ರತಿಕ್ರಿಯೆ: ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣ ಮಾಡಿರುವುದರ ಸಂಬಂಧ ಸ್ಥಳ ಪರಿಶೀಲನೆ ನಡೆಸಿ, ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

  1. ಚಿಕ್ಕಪೇಟೆ ವ್ಯಾಪ್ತಿಯ ಕೆಂಪೇಗೌಡ ನಗರದಲ್ಲಿ ಖಾತಾ ಮಾಡಿಕೊಡಲು ಮನವಿ.

ಪ್ರತಿಕ್ರಿಯೆ: ವಲಯ ಜಂಟಿ ಆಯುಕ್ತರು ಖಾತಾ ನೀಡುವ ವಿಚಾರವಾಗಿ ಸೂಕ್ತ ಕ್ರಮ ಕೈಗೊಂಡು ಶೀಘ್ರ ಖಾತಾ ಮಾಡಿಕೊಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

  1. ಮೂಸೂರು ರಸ್ತೆ – ಕಾರ್ಡ್ ರಸ್ತೆ ಜಂಕ್ಷನ್ ನಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಲು ಅನುಮತಿ ಕೊಡಲು ಮನವಿ.

ಪ್ರತಿಕ್ರಿಯೆ: ಮೈಸೂರು ರಸ್ತೆ – ಕಾರ್ಡ್ ರಸ್ತೆ ಜಂಕ್ಷನ್ ಬಳಿ ಸೂಕ್ತವಾದ ಜಾಗ ಪರಿಶೀಲಿಸಿ ಪ್ರತಿಮೆ ಅಳವಡಿಸಲು ಪ್ರಸ್ತಾವನೆ ಸಲ್ಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

  1. ರಸ್ತೆ ಬದಿ ಅಳವಡಿಸುವ ನಾಮಫಲಕಗಳಲ್ಲಿ ತಪ್ಪಾದ ಕನ್ನಡ ಪದಗಳನ್ನು ಬಳಸುತ್ತಿದ್ದು, ಅದನ್ನು ಸರಿಪಡಿಸಬೇಕು ಹಾಗೂ ಬನಶಂಕರಿ ದೇವಸ್ಥಾನದ ರಸ್ತೆಯ ಎರಡೂ ಬದಿಗಳಲ್ಲಿ ಕಸ ಬಿಸಾಡುತ್ತಿದ್ದು, ಆ ಸಮಸ್ಯೆಯನ್ನು ಸರಿಪಡಿಸಲು ಮನವಿ.

ಪ್ರತಿಕ್ರಿಯೆ: ರಸ್ತೆ ಬದಿ ಅಳವಡಿಸಿರುವ ಎಲ್ಲಾ ನಾಮಫಲಕಗಳನ್ನು ಪರಿಶೀಲಿಸಿ ಕನ್ನಡ ಪದಗಳು ತಪ್ಪಾಗಿರುವ ಕಡೆ ಅದನ್ನು ಸರಿಪಡಿಸಬೇಕು. ಇನ್ನು ಬನಶಂಕರಿ ದೇವಸ್ಥಾನದ ರಸ್ತೆಯ ಎರಡೂ ಬದಿ ತ್ಯಾಜ್ಯ ಹಾಕುತ್ತಿದ್ದು, ಅದಕ್ಕೆ ಶಾಶ್ವತ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

  1. ಅತ್ತಿಗುಪ್ಪೆ ವಾರ್ಡ್ ವ್ಯಾಪ್ತಿಯಲ್ಲಿ ರುದ್ರಭೂಮಿಯಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ.

ಪ್ರತಿಕ್ರಿಯೆ: ರುದ್ರಭೂಮಿಯಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

  1. ಬಸವನಗುಡಿ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ಪಾದಚಾರಿ ಓಡಾಟಕ್ಕೆ ಸಮಸ್ಯೆಯಾಗುತ್ತಿದ್ದು, ಅದನ್ನು ಬಗೆಹರಿಸಲು ಮನವಿ.

ಪ್ರತಿಕ್ರಿಯೆ: ಸಂಬಂಧಪಟ್ಟ ವಾರ್ಡ್ ಇಂಜಿನಿಯರ್ ಗಳು ಕೂಡಲೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಚರಣೆ ನಡೆಸಲು ಸೂಚನೆ ನೀಡಿದರು.

  1. ರಸ್ತೆಗಳಲ್ಲಿ ಬೋರ್ ವೆಲ್ ಕೊರೆಯುತ್ತಿದ್ದು, ಅದನ್ನು ತಡೆಗಟ್ಟಲು ಮನವಿ.

ಪ್ರತಿಕ್ರಿಯೆ: ಎಲ್ಲೆಲ್ಲಿ ರಸ್ತೆ ಬದಿ ಬೋರ್ ವೆಲ್ ಕೊರೆದಿದ್ದಾರೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

  1. ಎಸ್‌ಬಿಎಐ ಕಾಲೋನಿಯಲ್ಲಿ ಪಾದಚಾರಿ ಮಾರ್ಗ ಹಾಗೂ ರಸ್ತೆ ಬದಿ ವಾಹನಗಳ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ವಾಹನಗಳ ಸಂಚಾರ ಹಾಗೂ ಒಡಾಟಕ್ಕೆ ಸಮಸ್ಯೆಯಾಗುತ್ತಿದ್ದು, ಅದನ್ನು ಬಗೆಹರಿಸಲು ಮನವಿ.

ಪ್ರತಿಕ್ರಿಯೆ: ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಲು ಸೂಚನೆ.

  1. ಇ-ಖಾತಾ ಪಡೆಯಲು ಕಷ್ಟವಾಗುತ್ತಿದ್ದು, ಅದನ್ನು ಕೊಡಿಸುವ ವ್ಯವಸ್ಥೆ ಮಾಡಲು ಮನವಿ.

ಪ್ರತಿಕ್ರಿಯೆ: ಬೆಂಗಳೂರು ಒನ್ ಕೇಂದ್ರದಲ್ಲಿ ಇ-ಖಾತಾ ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಗೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡೋಗಿ ಇ-ಖಾತಾ ಪಡೆಯಬಹುದು ಎಂದು ತಿಳಿಸಿದರು.

ಈ ವೇಳೆ ವಲಯ ಆಯುಕ್ತರಾದ ವಿನೋತ್ ಪ್ರಿಯಾ, ವಲಯ ಜಂಟಿ ಆಯುಕ್ತರಾದ ಶಿವಕುಮಾರ್, ವಲಯ ಉಪ ಆಯುಕ್ತರಾದ ಡಿ.ಕೆ ಬಾಬು, ವಲಯ ಮುಖ್ಯ ಅಭಿಯಂತರರಾದ ರಾಜೇಶ್, ಪಾಲಿಕೆ, ಬೆಸ್ಕಾಂ, ಜಲಮಂಡಳಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button