ರಾಜಕಾಲುವೆ ಒತ್ತುವರಿಯಾಗಿರುವ ಕಟ್ಟಡವನ್ನು ಕೂಡಲೇ ತೆರವುಗೊಳಿಸಲು ಮುಖ್ಯ ಆಯುಕ್ತರು ಸೂಚನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರುಗಾಲುವೆಗಳ ಹಾಗೂ ಕೆರೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಎಲ್ಲಾ ವಲಯದ ತಹಶಿಲ್ದಾರ್ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ಮೊದಲಿಗೆ ಇಂದಿನಿಂದ ವಲಯವಾರು ಬೃಹತ್ ನೀರು ಗಾಲುವೆ ಹಾಗೂ ರಸ್ತೆಗಳ ನಿರ್ವಹಣೆಯ ಎಲ್ಲಾ ಜವಾಬ್ದಾರಿಯನ್ನು ಆಯಾ ವಲಯ ಆಯುಕ್ತರಿಗೆ ನೀಡಲು ಆದೇಶಿಸಿದರು.
ಬೃಹತ್ ನೀರುಗಾಲುವೆಗಳ ಒತ್ತುವರಿ ಸಂಬಂಧಿಸಿದಂತೆ ಮಾತನಾಡಿ. ಮೊದಲಿಗೆ ವಲಯವಾರು ಸಂಬಂಧಪಟ್ಟ ತಹಶಿಲ್ದಾರ್ ರವರು ಬಂದಿರುವ ಎಲ್ಲಾ ಪ್ರಸ್ತಾವನೆಯನ್ನು ಪರಿಮರ್ಶಿಸಿ ಒತ್ತುವರಿಯಾಗಿರುವ ಬಗ್ಗೆ ಆದೇಶಿಸಲಾದ ಸ್ಥಳವನ್ನು ನವೆಂಬರ್ 15ರೊಳಗೆ ತೆರವುಗೊಳಿಸಲು ಎಲ್ಲಾ ವಲಯ ಆಯುಕ್ತರಿಗೆ ನಿರ್ದೇಶಿಸಿದರು.
ಬೃಹತ್ ನೀರುಗಾಲುವೆ ಒತ್ತುವರಿ ತೆರವು ಮಾಡದಿದ್ದರೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ಮುಂದುವರೆದು ಕೆರೆ ಒತ್ತುವರಿ ಸಂಬಂಧಿಸಿದಂತೆ ಮಾತನಾಡಿ ತಕ್ಷಣವೇ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳ ಸರ್ವೆ ನಡೆಸಬೇಕು. ಸರ್ವೆ ದಾಖಲೆ ಬಂದ ತಕ್ಷಣ ಖಾಸಗಿ ಅಥವಾ ಸಾರ್ವಜನಿಕವಾಗಿ ಕೆರೆ ಒತ್ತುವರಿ ಕಂಡುಬಂದಲ್ಲಿ ಕೂಡಲೇ ತೆರವು ಗೊಳಿಸುವ ಕಾರ್ಯ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಯಾದ ಶ್ರೀ ಜಗದೀಶ್.ಜಿ, ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ಡಾ.ಹರೀಶ್ ಕುಮಾರ್, ವಿಶೇಷ ಜಿಲ್ಲಾಧಿಕಾರಿಗಳಾದ ಎಸ್.ಎಲ್.ಬಾಲಚಂದ್ರನ್, ವಲಯ ಆಯುಕ್ತರಾದ ಕರಿಗೌಡ, ರಮ್ಯ, ವಿನೋಥ್ ಪ್ರಿಯಾ, ಸತೀಶ್, ಅರ್ಚನಾ, ಗಿರೀಶ್ ಹಾಗೂ ಎಲ್ಲಾ ತಹಶಿಲ್ದಾರರುಗಳು, ಪ್ರಧಾನ ಅಭಿಯಂತರರು ಹಾಗೂ ಎಲ್ಲಾ ವಲಯದ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.