ಕತೆ

ಕಥೆಯಾದಳು ಹುಡುಗಿ…

ದೂರದರ್ಶನದ ಕೆಲವು ಚಾನಲ್ ಗಳಲ್ಲಿ ಬರುವ ಮಕ್ಕಳ ಕಾರ್ಯಕ್ರಮ ನೋಡುತ್ತಾ ಮೈ ಮರೆಯುತಿದ್ದ ಸ್ವಪ್ನಾಳಿಗೆ ಆ ಚಪ್ಪಾಳೆ ಹೊಗಳಿಕೆ ಕೇಳಿ ತನ್ನ ಮಗಳು ಟಿವಿಯಲ್ಲಿ ಬರಬೇಕು, ಸ್ಟೆಜ್ ಮೇಲೆ ಪ್ರತಿಭೆ ಪ್ರದರ್ಶಿಸ ಬೇಕು, ಪತ್ರಿಕೆಗಳಲ್ಲಿ ರಾರಾಜಿಸಬೇಕು, ಎಲ್ಲರ ಬಾಯಲ್ಲೂ ನನ್ನ ಮಗಳ ಗುಣಗಾನ ನಲಿಯಬೇಕು ಅಂದು ಆಸೆ ಪಟ್ಟಳು. ಅದಕ್ಕಾಗಿ ಅವಳ ಎರಡು ವರ್ಷದ ಮುದ್ದ ಗೊಂಬೆಗೆ ಆಗಿನಿಂದಲೆ ತಯಾರಿ ಮಾಡಲು ನಿರ್ಧರಿಸಿದಳು…

ಮುದ್ದು ಸಾರಾ ಳನ್ನು ಡ್ಯಾನ್ಸ್ ಕ್ಲಾಸ್ ಗೆ, ಸಂಗಿತ ಕ್ಲಾಸ್ ಗೆ ಸೆರಿಸಿದಳು, ಮೊಬೈಲ್ ನಲ್ಲಿ ಹಾಡು ಡೌನ್ಲೋಡ್ ಮಾಡಿಕೊಂಡು, ಮಗಳಿಗೆ ಹಾಡಿಸಿದ್ದೆ ಹಾಡಿಸಿದ್ದು, ಕುಣಿಸಿದ್ದೆ ಕುಣಿಸಿದ್ದು. ನರ್ಸರಿ ಇಂದ ಬಂದ ಮಗುಗೇ ಓದಿನ ಜೊತೆಗೆ ಹಾಡು ನೃತ್ಯ ಕಲಿಯುವುದೆ ಆಯಿತು, ಕ್ಲಾಸಿಕಲ್ ಡ್ಯಾನ್ಸ್, ಭರತ ನಾಟ್ಯ, ಸಂಗೀತ ಕಲಿಯುವುದರಲ್ಲಿಯೆ ಬಾಲ್ಯ ಕಳೆಯುತಿದ್ದ ಸಾರಾ ತನ್ನ ವಯಸ್ಸಿನ ಮಕ್ಕಳೊಂದಿಗೆ ಆಡಿ ನಲಿಯಲು ವೇಳೆಯೆ ಇಲ್ಲ.

ಅಮ್ಮ ಹೇಳಿದಂತೆ ಕೇಳುವ ಕೀ ಕೊಡುವ ಗೊಂಬೆ ಆದಳು ಪುಟ್ಟ ಮಗುವಿನಂತೆ ಹಠ ಇಲ್ಲ, ಹಠ ಮಾಡಿದರೆ ಅಮ್ಮನ ಏಟು ಆ ಕಂದನಿಗೆ. ಮಗಳನ್ನು ಟೀವಿ ಪರದೆಯ ಮೇಲೆ ನೋಡಲು ಕಟ್ಟು ನಿಟ್ಟಿನಲ್ಲಿ ಇಟ್ಟಳು. ಎಲ್ಲದಕ್ಕೂ ಒಂದು ಟೈಮ್ ಟೆಬಲ್. ನಿರಂತರ ಅಭ್ಯಾಸದ ಫಲ ನಾಲ್ಕು ವರ್ಷದ ಸಾರಾ, ಹಾಡು ನೃತ್ಯ ದಲ್ಲಿ ಪರಿಣತಿ ಹೊಂದಿದಳು…

ಐದು ವರ್ಷದ ದಾಟದೆ ಇದ್ದರು , ಪುಟ್ಟ ಮಗುವಿಗೆ ಪ್ರೊತ್ಸಾಹ ನೀಡುವ ಉದ್ದೇಶವೋ ಅಥವಾ ಟಿ ಆರ್ ಪಿ ಗೊಸ್ಕರವೊ ಒಟ್ಟಿನಲ್ಲಿ ಸಾರಾ ಗೆ ಸಂಗೀತ ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಾಗ ಸ್ವಪ್ನ ಳ ಸಂಭ್ರಮ ಹೇಳತಿರದು…

ಪ್ರತಿ ವಾರವು ಮಗಳನ್ನು ತಯಾರಿ ಮಾಡುವ ಕಸರತ್ತು ಸ್ವಪ್ನಳದು,  ಟಿ ವಿ  ಪರದೆಯ ಮೇಲೆ  ತನ್ನ ಕೋಗಿಲೆಯ  ಕಂಠದಿಂದ ಮುಗ್ಧ ಸಾರಾ ಎಲ್ಲರ ಮೆಚ್ಚುಗೆ ಗಳಿಸಿದಳು. ಸಾರಾ ಳ  ಪ್ರತಿಭೆ  ಮನೆ ಮನೆ  ಮಾತಾಯಿತು,  ಮಗಳ ಸಾಧನೆಗೆ ಸ್ವಪ್ನ ಹಿಗ್ಗಿದಳು. ಒಂದಿಷ್ಟು ದುಡ್ಡು ಬಂದಿತು,  ಮಗಳಿಗಾಗಿ  ತರ ತರಹದ  ಅಂದದ ಬಟ್ಟೆ, ಮ್ಯಾಚಿಂಗ್ ಸ್ಲೀಪರ್ ಬಳೆ, ಹೇರ್ ಬ್ಯಾಂಡ್ ಮನೆ ತುಂಬಿದವು. ಅವಳು ಇಷ್ಟ ಪಟ್ಟಲ್ಲಿ ಕರೆದೊಯ್ದಳು,  ತಿನ್ನಿಸಿದಳು  ಆದರೆ ಜಂಕ್ ಫುಡ್ ಹಾಗು ಕೊಲ್ಡ್ ಡ್ರಿಂಕ್ಸ್, ಐಸ್ ಕ್ರೀಮ್ ನಿಂದ ದೂರ ಇಟ್ಟಳು,  ಜಂಕ್ ಫುಡ್ ನಲ್ಲಿ ಎಣ್ಣೆ ಹೆಚ್ಚು ಇರೊದರಿಂದ ಧ್ವನಿ  ಮಧುರತೆ ಕಳೆದು ಕೊಳ್ಳುವದು,  ಐಸ್ ಕ್ರೀಮ್ ನಿಂದ ಶಿತ ಆಗುವುದು  ಹಾಡಲು ಆಗದು ಎನ್ನುವುದು ಅವಳ ಆಲೋಚನೆ...

ಸಂಗೀತ ಕಾರ್ಯಕ್ರಮ ದ ನಂತರ ನಾಟ್ಯದಲ್ಲಿ  ಅವಕಾಶ ದೊರೆಯಿತು,  ಆಗ ಸಾರಾ ನ ತಂದೆ ಸಾಕು  ಓದಿಕೊಂಡು ಎಲ್ಲ ಮಕ್ಕಳಂತೆ ಇರಲಿ ಅಂದರು ಸ್ವಪ್ನ  ಮಗಳಿಗೆ ಸಿಕ್ಕ ಅವಕಾಶ ಬಿಡಲು ತಯಾರಿಲ್ಲ. ನಾಟ್ಯದ ಮೂಲಕ ಸಾರಾ ಕರ್ನಾಟಕದ ಉದ್ದಗಲಕ್ಕು  ಮನೆ ಮಾತಾದಳು.  ಹೊರಗಿನ ಕನ್ನಡಿಗರನ್ನು ಸಹ ಸೇಳೆದಳು. ಸಾರಾ  ಸೆಲೆಬ್ರೆಟಿ  ಆದಳು ಎಲ್ಲಿ ಹೋದರು ಗುರುತಿಸಿ  ಮಾತನಾಡಿಸುವವರೆ,  ಆಟೋಗ್ರಾಫ್ ಪಡೆಯುವವರೆ.  ಆರು ತಿಂಗಳಲ್ಲಿ  ಸಾರಾ ಗೆ  ಲಕ್ಷಾಂತರ  ಅಭಿಮಾನಿಗಳು.

ಶಾಲೆಯಲ್ಲಿ ಜಾಣೆ ಆಗಿದ್ದ ಸಾರಾ ಗೆ ಈಗ ತಂದೆಯೊಂದಿಗೆ ಸರಿಯಾದ ವೇಳೆಗೆ ಶಾಲೆ ತಲುಪಲು ಆಗುತ್ತಿರಲಿಲ್ಲ.ದಾರಿಯಲ್ಲಿ ಗುರುತಿಸಿ ಮಾತನಾಡಿಸುವುದರಿಂದ ತಂದೆ ಸ್ಕೂಲ್ ವ್ಯಾನ್ ಗೆ ಕಳಿಸಲು ತೀರ್ಮಾನಿಸಿದನು. ತಾಯಿಗೆ ಮಗಳ ಅಭಿಮಾನಿಗಳನ್ನು ನೋಡಿ ಖುಷಿ ಆದರೆ ತಂದೆಗೆ ಅಸಮಾಧಾನ. ಆರು ವರ್ಷ ಕೂಡಾ ತುಂಬದ ಈ ಪುಟ್ಟ ಪೊರಿಗೆ ಬಿಡುವಿಲ್ಲದ ಕೆಲಸ, ಹಾಡು ನೃತ್ಯ ಕಲಿಕೆ, ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಶಾಲೆ ಓದು ಇದರ ಮಧ್ಯೆ ಊಟ. ಆಡಲು ಅವಳ ಮೆಚ್ಚಿನ ಟಾಮ್ ಆಂಡ್ ಜೆರ್ರಿ ನೋಡಲು ವೇಳೆಯಿಲ್ಲ…

ಎಲ್ಲರ ಮನ ಗೆದ್ದ ಸಾರಾ ಗೆ ಸಿನಿಮಾ ದಲ್ಲಿ ಬಾಲ ನಟಿಯಾಗಿ ಅವಕಾಶಗಳು ಬಂದವು. ಇದು ವರೆಗೂ ಸಹನೆ ಇಂದ ಇದ್ದ ರಾಜೀವ್ ಮಗಳು ಸಿನಿಮಾದಲ್ಲಿ ಅಭಿನಯಿಸಲು ಸುತಾರಾಂ ಒಪ್ಪಲಿಲ್ಲ. ಅವಳಿನ್ನು ಚಿಕ್ಕವಳು ಆಡಿಕೊಂಡಿರಲಿ ನಿನ್ನಾಸೆಯಂತೆ ಈಗಾಗಲೇ ಪ್ರೋಗ್ರಾಮ್ ನಲ್ಲಿ ಭಾಗವಹಿಸಿ ಹೆಸರು ಮಾಡಿದ್ದಾಳೆ ಸಾಕು, ಅತಿ ಆಸೆ ಬೇಡಾ, ಮಗುವಿನ ಸ್ವತಂತ್ರ ಕಿತ್ತುಕೊಳ್ಳ ಬೇಡ ಅಂದರೂ ಸಹ ಅವಳ ಪ್ರತಿಭೆ ಗೆ ಒಳ್ಳೆಯ ಅವಕಾಶ ಸಿಕ್ಕಿದೆ ನೀವು ತಡೆದು ಮಗಳ ಪ್ರತಿಭೆ ತುಳಿತಾ ಇದಿರಾ ಅಂದಳು ಸ್ವಪ್ನಾ.

ಈ ವಿಷಯದಲ್ಲಿ ಇಬ್ಬರ ಮಧ್ಯೆ ವಾದಗಳು ನಡೆದವು. ಸಾರಾ ನ ಇಷ್ಟ ಕೇಳುವವರೆ ಇಲ್ಲ. ಕೊನೆಗೂ ಸ್ವಪ್ನ ಮಗಳನ್ನು ಸಿನಿಮಾದಲ್ಲಿ ಅಭಿನಯಿಸಲು ಕಳಿಸಲು ಸಿದ್ಧಳಾದಳು. ಈಗಷ್ಟೇ ಈ ನಟನೆ, ದೊಡ್ಡವಳಾದ ಮೇಲೆ ಅಭಿನಯಿಸ ಕೂಡದು, ಅರೆ ನಗ್ನ ಬಟ್ಟೆ ಹಾಕಿ ನನ್ನ ಮಗಳು ನಟಿಸುವದು ಇಷ್ಟ ಇಲ್ಲ ಎಂದ ರಾಜೀವ್ ನ ಕಂಡಿಷನ್ ಗೆ ಒಪ್ಪಿದ್ದಳು…

ಬಾಲ ನಟಿಯಾಗಿ ಸಿನಿಮಾ ಗೆ ಕಾಲಿಟ್ಟ ಸಾರಾ ಗೆ ಅವಕಾಶ ಗಳ ಸುರಿಮಳೆಯೆ ಸುರಿಯಿತು. ಇವಳ ಮುಗ್ಧ ಅಭಿನಯಕ್ಕೆ ಸೋಲದವರೆ ಇಲ್ಲ. ಒಂದರ ಹಿಂದೆ ಒಂದು ಸಿನಿಮಾ ನಟನೆಯಲ್ಲಿ  ಬ್ಯುಸಿ ಆದಳು. ಪರಭಾಷೆಯಲ್ಲಿ ಬಾಲ ನಟಿಯಾಗಿ ಅವಕಾಶಗಳು ಸಿಕ್ಕವು, ಸಾರಾ  ಒಬ್ಬ ದೊಡ್ಡ ಸ್ಟಾರ್ ಲೆವೆಲ್ ಗೆ ಹೆಸರು ಮಾಡಿದಳು...

ಮೂರ್ನಾಲ್ಕು ವರ್ಷ ಮಗಳನ್ನು ಕರೆದುಕೊಂಡು ಸಿನಿಮಾ ಶೂಟಿಂಗ್, ಶಾಪಿಂಗ್, ಕಾರ್ಯಕ್ರಮ ಅಂದು ಸುತ್ತಾಡಿ ಸಾಕಾಗಿತ್ತು ಸ್ವಪ್ನಾ ಗೆ. ಗಂಡನ ಮಾತು ನೆನಪಾಯ್ತು, ಮಗಳಿಗೆ ಎಷ್ಟು ಸುಸ್ತಾಗಿರಬಹುದು ಅನ್ನುವ ಅರಿವಾಯ್ತು. ಜೊತೆಗೆ ಕೆಲವು ದೃಶ್ಯಗಳಲ್ಲಿ ನಟಿಸುವಾಗ ಮಗಳು ಪಡುವ ಕಷ್ಟ. ನಿರ್ಧೆಶಕರು ಸನ್ನವೇಶಕ್ಕೆ ತಕ್ಕಂತೆ ಅಭಿನಯ ಬರಬೇಕೆಂದು ಮಗಳಿಗೆ ಹಾಕುವ ಒತ್ತಡ ಕಂಡು ಹೆತ್ತ ಕರುಳು ಚುರ್ ಎಂದಿತು.

ಈಗ ಹಣ ಇದೆ ಆದರೆ ಗಂಡನೊಂದಿಗೆ ನಾಲ್ಕು ಮಾತು ಆಡುವಷ್ಟು ವೇಳೆ ಇಲ್ಲ, ಮಗಳನ್ನು ಗಾರ್ಡನ್ ಗೆ ಕರೆದುಕೊಂಡು ಹೋಗಿ ಆಟ ಆಡಿಸುವಷ್ಟು ವೇಳೆ ಇಲ್ಲ ಅನ್ನುವುದಕ್ಕಿಂತ ಅವಕಾಶ ಇಲ್ಲ. ಕಾರ್ ನಿಂದ ಇಳಿದರೆ ಮುತ್ತಿಕೊಳ್ಳುವ ಅಭಿಮಾನಿಗಳಿಂದ ತನ್ನ ಮಗಳ ಬಾಲ್ಯದ ಆಟ ಸ್ವತಂತ್ರ ಕಳೆದು ಕೊಳ್ಳತಿದಾಳೆ ಅನ್ನುವ ಅರಿವಾಯ್ತು…

ಸಾಕು ಇನ್ನೂ ಹಣ, ಹೆಸರು. ಇದರಿಂದ ಎಲ್ಲೋ ಒಂದು ಕಡೆ ದಾಂಪತ್ಯದ ಸುಖ ಸಂತೋಷ ಕಳೆದುಕೊಳ್ಳತಾ ಇದ್ದೆನೆ. ರಾಜೀವ್ ನಿಗು ಶಿಕ್ಷೆ ಕೊಡ್ತಾ ಇದೆನೆ. ಕುಟುಂಬದವರ ಜೊತೆ ಫೋನ್ ನಲ್ಲಷ್ಟೆ ಮಾತನಾಡುವುದಾಗಿದೆ, ನೇರವಾಗಿ ಕಷ್ಟ ಸುಖ ಹಂಚಿಕೊಳ್ಳೊದು ಕನಸಿನ ಮಾತಾಗಿದೆ. ಮದುವೆ ಸಮಾರಂಭಕ್ಕೆ ಹೋಗೋದು ಆಗ್ತಿಲ್ಲ. ಅಕಸ್ಮಾತ್ ಬಿಡುವು ಮಾಡಿಕೊಂಡು ಹೋದರು, ಮಗಳ ಚಿತ್ರದ ಬಗ್ಗೆ ಮಾತು. ಮೊದಲ್ಮೊದಲು ಖುಷಿ ಇಂದ ಹೆಮ್ಮೆ ಪಡ್ತಿದ್ದ ಸ್ವಪ್ನಾ ಗೆ ಈಗ ಅದೇ ಮಾತು ಬೇಸರ ಅನ್ನಿಸಿದೆ. ಸಂಸಾರದ ಕಷ್ಟ ಸುಖಗಳ ಮಾತು ಇಲ್ಲ, ಎಲ್ಲಿ ಹೋದರು ಸಿನಿಮಾ ಸುದ್ದಿ ಅದನ್ನು ಬಿಟ್ಟು ಬೇರೆ ಇಲ್ವಾ ಅನ್ನೋ ಹಾಗೆ ಆಗಿದೆ…

 ಎಚ್ಚೆತ್ತುಕೊಂಡ  ಸ್ವಪ್ನಾ ಮಗಳನ್ನು  ಸಿನಿಮಾದಿಂದ ದೂರ ಇಡಲು ಪ್ರಯತ್ನ ಪಟ್ಟಳು ಆದರೆ ಅದಷ್ಟು ಸುಲಭವಿರಲಿಲ್ಲ.   ಪತ್ನಿಯ  ನಡೆ ರಾಜೀವನಿಗೂ  ಸಮಾಧಾನ ತಂದಿತು ಅವನು ಕೈ ಜೋಡಿಸಿದನು. ಎಜುಕೆಷನ್ ಹಾಗು ಆರೋಗ್ಯದ ನೆಪ ಹೇಳಿ  ಬಣ್ಣದ ನಂಟನ್ನು  ಕಳಚಿಕೊಳ್ಳುವಷ್ಟರಲ್ಲಿ ಸಾಕಾಗಿತ್ತು.

ಹತ್ತು ವರ್ಷದ ಸಾರಾ ಈಗ ಶಾಲೆ ಮನೆ ಅಪ್ಪಾ ಅಮ್ಮನ ಜೊತೆ ಖುಷಿ ಇಂದ ಕಾಲ ಕಳೆದಳು. ತನ್ನ ಗಮನವನ್ನು ಸಂಪೂರ್ಣವಾಗಿ ಓದಿನ ಕಡೆ ನೆಟ್ಟಳು.

ಸಾರಾ ಈಗ 21 ರ ತರುಣಿ, ಬಿ ಎ ಎಮ್ ಎಸ್ ಸ್ಟೂಡೆಂಟ್. ಇವಳು ಬಾಲ ನಟಿ ಎಂದು ಎಷ್ಟೋ ಜನರಿಗೆ ತಿಳಿದಿಲ್ಲ, ಅವಳ ಕಾಲೇಜ್ ಫ್ರೆಂಡ್ಸ್ ಗೆ ಕೂಡಾ ತಿಳಿದಿಲ್ಲ. ಎಲ್ಲರಂತೆ ಸಾಮಾನ್ಯ ಹುಡುಗಿಯಾಗಿ ಓದಿಕೊಂಡು ಹಾಯಾಗಿದ್ದ ಸಾರಾ ನಿರ್ದೇಶಕರ ಕಣ್ಣಿಗೆ ಬಿದ್ದಳು. ಈ ದಂತದ ಗೊಂಬೆಯನ್ನು ಕಳೆದುಕೊಳ್ಳಲು ಬಯಸದೆ ಅವಳ ಬಗ್ಗೆ ವಿಚಾರಿಸಿದಾಗ ಬಾಲನಟಿ ಎಂಬ ವಿಷಯ ತಿಳಿದು ಅವಳ ಮನೆ ಬಾಗಿಲಿಗೆ ಅವಕಾಶಗಳು ಹುಡುಕಿಕೊಂಡು ಬಂದವು…

ಬಾಲ ನಟಿಯಾಗಿ ಮಿಂಚಿದ ಹುಡುಗಿ ಇಂದು ನಾಯಕಿ ನಟಿ ಅನ್ನೋ ವಿಷಯ ಪಬ್ಲಿಸಿಟಿ ಆದರೆ ಜನರ ಕೂತುಹಲ ಹೆಚ್ಚಾಗುತ್ತೆ, ಹಾಕಿದ ಬಂಡವಾಳಕ್ಕೆ ನಷ್ಟ ಇಲ್ಲ ಅಂದು ನಿರ್ಮಪಕ ನಿರ್ದೇಶಕರ ದಂಡೆ ಮನೆ ಬಾಗಿಲಿಗೆ ಬಂದಿತು. ಅವಳು ಕೇಳಿದಷ್ಟು ಸಂಭಾವನೆ ಕೊಡಲು ತಯಾರಿದ್ದರು…

ಆದರೆ ಸ್ವಪ್ನಾ ಹಾಗೂ ರಾಜೀವ್  ಒಪ್ಪದೆ ನಿರಾಕರಿಸಿದರು.   ಈ ವಿಷಯ ಕಾಲೇಜ್ ಸ್ನೇಹಿತರಿಗೆ, ಬಂಧುಗಳಿಗೆ, ನೆರೆ ಹೊರೆಯವರಿಗೆ ಮುಟ್ಟಿತು. ಸಿನಿಮಾದಲ್ಲಿ  ಅವಕಾಶ  ಸಿಕ್ಕಿದೆ ಅಂದ್ರೆ ನಿನ್ನ ಮಗಳು ಅದೃಷ್ಟ ಮಾಡಿದಾಳೆ  ನಟನೆ ಮಾಡ್ಲಿ ಬೀಡು  ಇಂತಹ ನಟಿಯ ಪರಿಚಿತರು ನೆರೆಹರೆಯವರು ಅಂತಾ ಹೇಳಿಕೊಳ್ಳಲು ನಮಗೂ ಹೆಮ್ಮೆ ಅಂದು ರಾಜೀವ್ ಸ್ವಪ್ನಾ ಗೆ ಹೇಳಿದರು...

 ಬಾಲನಟಿ ಎಂದು ಗೊತ್ತಾದ ಮೇಲೆ  ಕಾಲೇಜ್ ನ ಸೀನಿಯರ್ಸ್, ಜುನಿಯರ್ಸ್ ಎಲ್ಲ ಮಾತನಾಡಿಸಿ ಸಿಕ್ಕ ಅವಕಾಶ ಯಾಕೆ ಬಿಡ್ತಿಯಾ ಸಾರಾ ಅದೃಷ್ಟ ನಿನ್ನುನ್ನು ಹುಡುಕಿಕೊಂಡು ಬಂದಿದೆ   ಅಂದರು.   ಗುರುಗಳು ಸಹ ಕಲೆ ಅನ್ನೋದು ಎಲ್ಲರಿಗೂ ಒಲಿಯುವುದಿಲ್ಲ ನಿನಗೆ ಒಲಿದಿದೆ ಒಪ್ಪಿಕೊ ಅಂದರು. ಎಲ್ಲರೂ ಒತ್ತಡ ಹೇರುವವರೆ ಆದರೆ ಮತ್ತೆ ಈ ಸಿನಿಮಾ ರಂಗಕ್ಕೆ ಇಳಿದರೆ  ಮತ್ತೆ ಎಲ್ಲರ ಜೊತೆ ಬೆರೆಯುವ, ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಅಲೆದಾಡುವ ಈ ಸ್ವತಂತ್ರ ಸಿಗಲ್ಲ ಅನ್ನುವುದು ಅನುಭವ ಅವಳಿಗೆ ಆಗಿತ್ತು...

ಎಲ್ಲರ ಒತ್ತಡಕ್ಕೆ ಮಣಿದು ಸಾರಾ ನಟಿಸಲು ಒಪ್ಪಿಕೊಂಡಳು. ಅವಕಾಶ ಸಿಗುವುದೆ ಅದೃಷ್ಟ ಅನ್ನುವವರ ಮುಂದೆ ವಾದ ಮಾಡಲಾಗದೆ ರಾಜೀವ್ ಸ್ವಪ್ನಾ ಕೂಡಾ ಒಪ್ಪಿದರು. ಮತ್ತೆ ಸಿನಿಮಾ ರಂಗಕ್ಕೆ ಕಾಲಿಟ್ಟು ಮೊದಲ ಚಿತ್ರದಲ್ಲಿಯೆ ಹೆಸರು ಮಾಡಿದಳು. ಒಂದಾದ ಮೇಲೆ ಒಂದರಂತೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶ ಸಿಕ್ಕವು…

ಸಾರಾ ಕಥೆಯನ್ನು ಓದಿ ನಿರ್ದೇಶಕರ ಜೊತೆ ಪಾತ್ರದ ಬಗ್ಗೆ ಚರ್ಚಿಸಿ ಆಯ್ಕೆ  ಮಾಡಿಕೊಳ್ಳುತಿದ್ದಳು.  ಸಾಲು ಚಿತ್ರಗಳು ಹಿಟ್ ಆದವು,  ಸ್ಟಾರ್ ನಟರೊಡನೆ ಅವಕಾಶ ದೊರೆಯಿತು  ಆದರೆ ಅವಳು  ನಿರ್ವಹಿಸುವ  ಪಾತ್ರ  ಇಷ್ಟ ಆಗದೆ ಒಪ್ಪಲಿಲ್ಲ. ಅದೇ ದೊಡ್ಡ  ಸುದ್ದಿಯಾಗಿ  ಸಾರಾಳ  ನಡೆಯನ್ನು ಅಹಂ ಅಂದರು ಆ ನಟರ ಅಭಿಮಾನಿಗಳು,  ಕಥೆಯನ್ನು ಓದಿ ಆರಿಸಿ ಅಳೆದು ತೂಗಿ ಶೋಧಿಸಿ ಒಪ್ಪಿಕೊಂಡರು ಸಹ ಕೆಲವೊಮ್ಮೆ ಹೇಳುವಾಗಿನ ಕಥೆ, ಅಭಿನಯಿಸುವಾಗಿನ  ಸನ್ನಿವೇಶ  ಬೇರೆನೆ ಆಗಿ  ಮುಜುಗರ ಪಡುವಂತಹ ಪಾತ್ರ ಅನಿವಾರ್ಯವಾಗಿ  ಮಾಡಬೇಕಾಗುತಿತ್ತು. ಯಾವ ಪತ್ರಿಕೆ, ಚಾನಲ್ ಮುಂದೆ ಇದರ ಬಗ್ಗೆ ಹೇಳುವ ಹಾಗಿಲ್ಲ, ವಿರೋಧಿಸುವ  ಹಾಗಿಲ್ಲ, ಅದೇ ದೊಡ್ಡ ಸುದ್ದಿಯಾಗಿ  ತನ್ನ ಹೆಸರಿಗೆ  ಕಳಂಕ  ಬರುವುದರ ಅರಿವಿತ್ತು...

ಮಗಳ ಪರಿಸ್ಥಿತಿ ಅರ್ಥ ಮಾಡಿಕೊಂಡ  ತಂದೆ ತಾಯಿ ಅವಳಿಗೆ ಮದುವೆ ಮಾಡಲು ವರಾನ್ವೇಷಣೆಯಲ್ಲಿ ತೊಡಗಿದರು. ಈ ದೇಶದಲ್ಲಿ ಇರುವವರೆ ಬೇಡಾ, ಮತ್ತೆ ಈ ಬಣ್ಣದ ಜಗತ್ತು  ಬಲೆ ಬಿಸುತ್ತೆ ಎಂದು ವಿದೇಶಿ ಕನ್ನಡಿಗನೊಂದಿಗೆ  ವಿವಾಹ ನಿಶ್ಚಯಿಸಿದರು...

ಮೂರು ವರ್ಷ ಸಿನಿಮಾದಲ್ಲಿ ಬಣ್ಣ ಹಚ್ಚಿ ಕುಣಿದ ಸಾರಾ ಮದುವೆ ಆಗಿ ಈ ಬಣ್ಣದ ಲೋಕದಿಂದ ದೂರ ಹೋಗಿ ತನ್ನ ಮನೆ ಗಂಡ ಸಂಸಾರ ಅಂದುಕೊಂಡು ಹಾಯಾಗಿ ಇರಬೇಕು ಅಂದು ಬಯಸಿದಳು. ಅದನ್ನು ಮದುವೆ ಆಗುವ ಹುಡುಗನಿಗೂ ಕೂಡಾ ಹೇಳಿದಳು. ಅವನು ಸಾರಾ ನ ಕಂಡೀಷನ್ ಒಪ್ಪಿದ…

ಇಷ್ಟು ಬೇಗ ಮದುವೆ,  ಸಿನಿಮಾದಲ್ಲಿ ಇನ್ನೂ ಅವಕಾಶಗಳ ಸರತಿಯೆ ಇತ್ತು,  ಇನ್ನೂ ಎತ್ತರಕ್ಕೆ ಬೆಳೆದು ಹೆಸರು ಗಳಿಸುತ್ತಾಳೆ ಅನ್ನುವವರ ಮಾತು  ಲೆಕ್ಕಿಸದೆ  ಸ್ವಪ್ನಾ ರಾಜೀವ್  ಅದ್ಧೂರಿಯಾಗಿ ತಮ್ಮ ಮಗಳ ಮದುವೆ ಮಾಡಿದರು...

ಒಂದು ವರ್ಷ ಗಂಡನೊಂದಿಗೆ ಸಂತೋಷವಾಗಿ ಕಳೆದಳು, ಅವಳ ಸೌಂದರ್ಯ ವನ್ನು ಇಂಚಿಚಾಗಿ ಅನುಭವಿಸಿದ ಪತಿಗೆ ಈಗ ಅವಳ ಸೌಂದರ್ಯ ದಿಂದ ಹಣ ಗಳಿಸುವ ಯೋಚನೆ. ಇಷ್ಟು ಚನ್ನಾಗಿ ಇದಿಯಾ ಸಿನಿಮಾದಲ್ಲಿ ನಟನೆ ಮುಂದುವರೆಸು ಅಂದಾಗ ಸಾರಾ ನಯವಾಗಿ ನಿರಾಕರಿಸಿದಳು. ಬರ ಬರುತ್ತಾ ಒತ್ತಡ ಹಾಕತೊಡಗಿದ, ಅವಳ ನಟನೆಯ ರೊಮ್ಯಾಂಟಿಕ್ ಪೋಸ್ಟರ್ ತೋರಿಸಿ ಚುಚ್ಚು ಮಾತನಾಡಿದ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸಿಸಿದಾಗ ಸಾರಾ ನಲುಗಿ ಹೋದಳು. ಅವಳ ಸಹನೆ ಕಟ್ಟೆ ಒಡೆಯಿತು, ಇನ್ನೂ ಇವನೊಂದಿಗೆ ಬಾಳಲಾಗದು ಅನಿಸಿತು, ಮತ್ತೆ ಬಣ್ಣದ ಜಗತ್ತಿಗೆ ಮರಳಲು ಬಯಸದೆ ವಿಚ್ಛೇದನ ಪಡೆದಳು…

ಓದನ್ನು ಕಂಟಿನ್ಯು ಮಾಡಿದಳು. ಮೇಡಿಕಲ್ ಮುಗಿಸಿದ್ದರಿಂದ ಡಾಕ್ಟರ್ ಸಹನಾ ಅವರ ಹತ್ತಿರ ಪ್ರಾಕ್ಟೀಸ್ ಗೆ ಹೋಗತೊಡಗಿದಳು. ಇವಳ ವಿಷಯ ಎಲ್ಲ ತಿಳಿದ ಡಾಕ್ಟರ್ ಸಹನಾ ತಮ್ಮ ಮಗ ಡಾಕ್ಟರ್ ಪ್ರಕಾಶ್ ಜೊತೆ ಮದುವೆ ಮಾಡಲು ಬಯಸಿದಳು.

ಮೊದಲ ಪತ್ನಿ ಮಗಳನ್ನು ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಕಳೆದುಕೊಂಡು ಖಿನ್ನತೆಗೆ ಜಾರಿದ್ದ ಪ್ರಕಾಶ ಸಂಪೂರ್ಣ ಗುಣ ಮುಖನಾಗಿ ತನ್ನ ವೈದ್ಯ ವೃತ್ತಿಯ ಜೊತೆಗೆ ಬಡವರು ನಿರ್ಗತಿಕರಿಗೆ ಸಹಾಯ ಮಾಡುತಿದ್ದ.

ತನಗಿಂತ 14 ವರ್ಷ ದೊಡ್ಡವನಾದರು ಅವನ ಆದರ್ಶ ಕ್ಕೆ ಸೋತು, ತಂದೆ ತಾಯಿ ಯ ಒಪ್ಪಿಗೆ ಪಡೆದು ಮದುವೆ ಆದಳು…

ಆದರೆ ಮಾಧ್ಯಮದವರು   ಶ್ರೀಮಂತಿಕೆಗೆ, ಹಣದಾಸೆಗೆ  ಸೋತು,  ಮೊದಲ ಗಂಡನಿಂದ ವಿಚ್ಛೇದನ ಪಡೆದು ತನಗಿಂತ 14 ವರ್ಷ  ಹಿರಿಯ ವೈದ್ಯನನ್ನು  ನಟಿ  ಸಾರಾ  ವಿವಾಹ ವಾದಳು ಅಂದು    ಸುದ್ದಿ ಹರಡಿದವು,   ಸಾರಾ ನ ಬಗ್ಗೆ  ನಾನಾ ಕಥೆಗಳು ಹುಟ್ಟಿಕೊಂಡವು...    

ಸುಮಾ ಯು ಕೆ ✍️

Leave a Reply

Your email address will not be published. Required fields are marked *

Back to top button